ದಾವಣಗೆರೆ: ಸದ್ಯ ಮುಖ್ಯಮಂತ್ರಿಗಳ ಬದಲಾವಣೆ ಪ್ರಶ್ನೆ ಇಲ್ಲ. ನಮ್ಮ ನಾಯಕರೇ ಹೇಳಿದ ನಂತರ ಚರ್ಚೆ ಅನಗತ್ಯ. ಬಿಹಾರ ಚುನಾವಣೆಯಿಂದ ಸಿದ್ದರಾಮಯ್ಯ ಮತ್ತಷ್ಟು ಗಟ್ಟಿಯಾಗಿದ್ದಾರೆ ಎಂದೇನಿಲ್ಲ, ಮೊದಲಿನಿಂದಲೂ ಗಟ್ಟಿಯಾಗಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಬಿಹಾರದಲ್ಲಿ ಸೋತ ಮಾತ್ರಕ್ಕೆ ಕರ್ನಾಟಕದಲ್ಲಿಯೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೋಲಾಗುತ್ತದೆ ಎನ್ನುವ ಅಗತ್ಯವಿಲ್ಲ. ಬಿಹಾರಕ್ಕೂ ಕರ್ನಾಟಕಕ್ಕೂ ಸಾಕಷ್ಟು ಭಿನ್ನತೆ ಇದೆ ಅಲ್ಲಿನ ಸೋಲಿನ ಪಾಠ ಕಲಿತು ಲೋಪ ಸರಿಪಡಿಸಿಕೊಂಡು ಚುನಾವಣೆ ಗೆಲ್ಲುತ್ತೇವೆ ಎಂದರು.
ಚುನಾವಣೆಗೂ ಮೊದಲೇ ಸಾಕಷ್ಟು ಕಡೆ ಮತ ಕಳ್ಳತನ ಆರೋಪ ಕೇಳಿಬಂದಿದೆ. ಚುನಾವಣಾ ಆಯೋಗ ಇದಕ್ಕೆಲ್ಲಾ ಉತ್ತರ ಕೊಡಬೇಕು ಉತ್ತರ ಕೊಟ್ಟರೆ ಸರಿಯಾಗಲಿದೆ. ಬಿಹಾರ ಚುನಾವಣೆಗೂ ಕರ್ನಾಟಕಕ್ಕೂ ಹೋಲಿಕೆ ಮಾಡುವುದು ಸರಿಯಲ್ಲ.
ಸಚಿವ ಸಂಪುಟ ಪುನಾರಚನೆ ವಿಷಯ ಗೊತ್ತಿಲ್ಲ, ರಾಹುಲ್ ಗಾಂಧಿ ಅವರು ಈ ಬಗ್ಗೆ ನನ್ನೊಂದಿಗೆ ಚರ್ಚೆ ಮಾಡಲ್ಲ, ನಾನು ಸಂಬಂಧಿಸಿದ ವ್ಯಕ್ತಿಯೇ ಅಲ್ಲ,ಇದನ್ನೆಲ್ಲಾ ಮುಖ್ಯಮಂತ್ರಿಗಳು, ವರಿಷ್ಠರು ನಿರ್ಧರಿಸಲಿದ್ದಾರೆ. ಆದರೆ ಸಂಪಟ ವಿಸ್ತರಣೆಯಾದರೆ ಮತ್ತೆ ಎರಡು ಸ್ಥಾನ ವಾಲ್ಮೀಕಿ ಸಮುದಾಯಕ್ಕೆ ನೀಡಬೇಕೆಂದು ಕೇಳುತ್ತೇವೆ ಎಂದರು.



