ಡಿವಿಜಿ ಸುದ್ದಿ, ದಾವಣಗೆರೆ: ಈ ಬಾರಿಯ ಬಜೆಟ್ ನಲ್ಲಿ ದಾವಣಗೆರೆ ಜಿಲ್ಲೆಗೆ ಯಾವುದೇ ಹೊಸ ಯೋಜನೆ ಘೋಷಣೆ ಮಾಡಿಲ್ಲ. ಸ್ಕೌಟ್ ಅಂಡ್ ಗೈಡ್ಸ್ ಗೆ ದೊಡ್ಡ ಬಳ್ಳಾಪುರ, ದಾವಣಗೆರೆ, ಉಡುಪಿ ಕೇಂದ್ರಗಳಿಗೆ ಸೇರಿ 4 ಕೋಟಿ ಅನುದಾನ ಬಿಟ್ಟರೆ, ಬೇರೆ ಯಾವುದೇ ಹೊಸ ಯೋಜನೆ ಘೋಷಣೆ ಮಾಡಿಲ್ಲ.
ದಾವಣಗೆರೆ ಬಿಜೆಪಿಯ ಭದ್ರ ಕೋಟೆಯಾಗಿದ್ದು, 6 ಬಿಜೆಪಿ ಶಾಸಕರು.1 ಸಂಸದರನ್ನು ಒಳಗೊಂಡಿರುವ ಜಿಲ್ಲೆಗೆ ಯಾವುದೇ ಹೊಸ ಯೋಜನೆ ಘೋಷಣೆ ಮಾಡಿಲ್ಲ. ಈ ಬಗ್ಗೆ ಜಿಲ್ಲೆಯ ಜನರು ಏನು ಪ್ರತಿಕ್ರಿಯೆ ಈ ರೀತಿ ಇದೆ.
‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿರುವ ರಾಜ್ಯ ಬಜೆಟ್ ನಿರಾಸೆದಾಯಕವಾಗಿದೆ. ಈ ಬಜೆಟ್ ನಲ್ಲಿ ಯಾವುದೇ ಹೊಸ ಯೋಜನೆ ಘೋಷಣೆ ಮಾಡಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ಜನ ಸಾಮಾನ್ಯರ ಮೇಲೆ ಹೊರೆ ಹಾಕಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆಯಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. 6 ಶಾಸಕರು, 1 ಸಂಸದರನ್ನು ಕೊಡುಗೆ ನೀಡಿದ ದಾವಣಗೆರೆ ಜಿಲ್ಲೆಗೆ ಯಾವುದೇ ಹೊಸ ಯೋಜನೆ ಘೋಷಿಸಿಲ್ಲ. ಈ ಬಾರಿಯ ಬಜೆಟ್ ದಾವಣಗೆರೆ ಜನರಿಗೆ ನಿರಾಸೆ ಮೂಡಿಸಿದೆ. ದಾವಣಗೆರೆ ಜಿಲ್ಲೆಗೆ ಮಂತ್ರಿ ಭಾಗ್ಯನೂ ಇಲ್ಲ, ಹೊಸ ಯೋಜನೆ ಭಾಗ್ಯ ಇಲ್ಲ’
– ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್
‘ಕೃಷಿ ಕ್ಷೇತ್ರ ತೀವ್ರ ಸಂಕಷ್ಟದಲ್ಲಿದ್ದು, ರೈತರ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಹೀಗಾಗಿ ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು ಎಂದು ಪ್ರತಿ ಸಲ ಬಜೆಟ್ ಮಂಡನೆ ಮಾಡಿದಾಗಲೂ ಆಗ್ರಹಿಸುತ್ತೇವೆ. ಆದರೆ, ಯಾವ ಸರ್ಕಾರವೂ ಜಾರಿ ಮಾಡಿಲ್ಲ. ಇನ್ನು ಕಳೆದ 30 ವರ್ಷದಿಂದ ಮಾಯಕೊಂಡ ಗ್ರಾಮವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುತ್ತಾರೆ ಎಂದು ಕಾಯುತ್ತಿದ್ದೇವೆ. ಆದರೆ, ಈ ಬಾರಿಯ ಬಜೆಟ್ ನಲ್ಲಿಯಾದರೂ ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವ ನಿರೀಕ್ಷೆ ಇತ್ತು. ಆದರೆ ಮಾಯಕೊಂಡ ತಾಲ್ಲೂಕನ್ನಾಗಿ ಘೋಷಣೆ ಮಾಡದಿರುವುದು ಬೇಸರ ಮೂಡಿಸಿದೆ’.
-ಎಂ. ಎಸ್. ಕೆ. ಶಾಸ್ತ್ರೀ, ಕರ್ನಾಟಕ ಪ್ರದೇಶ ರೈತ ಸಂಘ ಅಧ್ಯಕ್ಷ
‘ಯಡಿಯೂರಪ್ಪ ಒತ್ತಡ ಪರಿಸ್ಥಿತಿಯಲ್ಲಿಯೂ ಉತ್ತಮ ಬಜೆಟ್ ಮಂಡನೆ ಮಾಡಿದ್ದಾರೆ. ಆದರೆ, ರೈತರಿಗೆ ಇನ್ನಷ್ಟು ಉತ್ತಮ ಯೋಜನೆ ನೀಡುವ ನಿರೀಕ್ಷೆ ಇತ್ತು. ಯಾವುದೇ ಹೊಸ ಯೋಜನೆ ಘೋಷಣೆ ಮಾಡಿಲ್ಲ’.
-ಅಜ್ಜಯ್ಯ, ಯುವ ರೈತ



