ಡಿವಿಜಿ ಸುದ್ದಿ, ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿರುವ ಬಜೆಟ್ ನಲ್ಲಿ ಯಾವುದೇ ಅಭಿವೃದ್ಧಿ ಮುನ್ನೋಟ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಜಿಡಿಪಿ ಶೇ 4.6 ಇದೆ. ರಾಜ್ಯದಲ್ಲಿಯೂ ಜಿಡಿಪಿ ಶೇ 1ರಷ್ಟು ಕಡಿಮೆಯಾಗಿದೆ. ಆರು ವಲಯಗಳನ್ನಾಗಿ ವಿಂಗಡಿಸಿ ಬಜೆಟ್ ಮಂಡಿಸಿದ್ದಷ್ಟೇ ಬದಲಾವಣೆ. ಇದನ್ನು ಬಿಟ್ಟು ಯಾವುದೇ ಆದ್ಯತಾ ವಲಯ ಗುರುತಿಸಿಲ್ಲ.ಇದೊಂದು ರೈತ , ಅಲ್ಪಸಂಖ್ಯಾತ , ಹಿಂದುಳಿದವರ ವಿರೋಧಿ ಬಜೆಟ್ ಎಂದಿದ್ಧಾರೆ.
ಕೃಷಿಗೆ ಬಜೆಟ್‌ನಲ್ಲಿ ಹೆಚ್ಚಿನ ಹಣ ಮೀಸಲಿಟ್ಟಿಲ್ಲ. ಹಸಿರು ಶಾಲು ಹಾಕಿದರೆ ರೈತರು ಉದ್ದಾರ ಆಗುತ್ತಾರಾ? ಯಡಿಯೂರಪ್ಪ ವ್ಯವಸಾಯ ಮಾಡಿದ್ದಾರೋ ಏನು ಗೊತ್ತಿಲ್ಲ. ಏಕೆಂದ್ರೆ ಅವರು ಮಂಡ್ಯದಲ್ಲಿ ಲಿಂಬೆಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದರು. ನಾನೂ ಮೂರು ವರ್ಷ ಹಸಿರು ಶಾಲು ಹಾಕಿಕೊಂಡಿದ್ದೆ. ಅವರು ಯಾವುದಾದರೂ ಶಾಲು ಹಾಕಿಕೊಳ್ಳಲಿ. ನೀರಾವರಿ ಮತ್ತು ಕೃಷಿಗೆ ಯಾವುದೇ ವಿಶೇಷ ಅನುದಾನ ನೀಡಿಲ್ಲ ಅಸಮಾಧಾನ ವ್ಯಕ್ತಪಡಿಸಿದರು.
ಮಹದಾಯಿ ಯೋಜನೆ ಕುರಿತು ಬಿಜೆಪಿಯವರು ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ. ನಮ್ಮ ಅವಧಿಯಲ್ಲಿ ಹೋರಾಟ ಮಾಡಿದ್ದೇವೆ. ಸುಪ್ರೀಂ ಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡಿದೆ. ಇದರಲ್ಲಿ ಬಿಜೆಪಿಯವರ ಪಾತ್ರ ಏನಿದೆ. ಗೋವಾ ಸಿಎಂ ಜೊತೆ ಮಾತನಾಡಲು ಇವರಿಗೆ ಆಗಲಿಲ್ಲ. ಮಹದಾಯಿ ಯೋಜನೆಯನ್ನು ಕನಿಷ್ಟ 2 ವರ್ಷದಲ್ಲಿ ಪೂರ್ಣಗೊಳಿಸಬೇಕು ಎಂದರು.
ಭಾಗ್ಯಲಕ್ಷ್ಮಿ, ಸೈಕಲ್ ಯೋಜನೆ ಮಾತ್ರ ಹೇಳಿದ್ದಾರೆ. ಎಸ್‌ಸಿಪಿಟಿಎಸ್‌ಪಿಯಲ್ಲಿ ಸುಮಾರು 4 ಸಾವಿರ ಕೋಟಿ ಹೆಚ್ಚಳವಾಗಬೇಕಿತ್ತು. ಬಜೆಟ್ ಗಾತ್ರ ಹೆಚ್ಚಾದಂತೆ ಆ ಯೋಜನೆಗೂ ಹೆಚ್ಚಿನ ಅನುದಾನ ನೀಡಬೇಕಿತ್ತು. ಮೂಗಿಗೆ ತುಪ್ಪ ಹಚ್ಚಲು ಘೋಷಣೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ರೈತರ ಸಾಲ ಮನ್ನಾ ಯೋಜನೆ ಏನಾಯಿತು ಎಂದು ಹೇಳಬೇಕಿತ್ತು. ಆದರೆ, ಆದರ ಬಗ್ಗೆ ಎಲ್ಲಿಯೂ ಪ್ರಸ್ತಾಪವಿಲ್ಲ. ಲ್ಯಾಂಡ್ ಬ್ಯಾಂಕ್‌ಗಳ ಸುಸ್ತಿ ಬಡ್ಡಿ ಮನ್ನಾ ಮಾಡುವುದಾಗಿ ಹೇಳಿದ್ದರು. ಅದನ್ನೂ ಪ್ರಸ್ತಾಪಿಸಿಲ್ಲ ಎಂದು ಕಿಡಿಕಾರಿದರು.



