ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಾಧಿಕಾರಿ ಸಚಿವ ಸತೀಶ್ ಜಾರಕಿಹೊಳಿ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಬಾಲಿಶವಾದದ್ದು ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ಅಸಮಾಧಾನ ವ್ಯಕ್ತಪಡಿಸಿದರು.
ಹೈಕಮಾಂಡ್ ತೀರ್ಮಾನಕ್ಕೆ ಬದ್ಧ
ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷ ಇದ್ದರೆ ನಾನು, ಇನ್ನೊಬ್ಬರು. ಪಕ್ಷ ಇಲ್ಲದಿದ್ದರೆ ಉತ್ತರಾಧಿಕಾರಿಯೂ ಇರಲ್ಲ,ದಕ್ಷಿಣಾಧಿಕಾರಿಯೂ ಇರಲ್ಲ. ಕಾಂಗ್ರೆಸ್ ಪಕ್ಷಕ್ಕೆ ಹೈಕಮಾಂಡ್ ಇದೆ. ಇದು ಮೈಸೂರು ರಾಜರ ಮನೆ ಅಲ್ಲ. ಮೈಸೂರು ರಾಜಮನೆತನದಲ್ಲಿ ಕುಟುಂಬದವರೇ ಉತ್ತರಾಧಿಕಾರಿಯಾಗಿ ಮುಂದುವರಿಯುತ್ತಾರೆ. ಇಲ್ಲಿ (ಕಾಂಗ್ರೆಸ್ ಪಕ್ಷದಲ್ಲಿ) ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧವಾಗಿರಬೇಕು ಎಂದರು.
ಪಕ್ಷಕ್ಕೆ ಮುಜುಗರ ತರುವ ಹೇಳಿಕೆ
ಮುಂದಿನ ಮುಖ್ಯಮಂತ್ರಿ ಯಾರು? ಮುಂದಿನ ಉತ್ತರಾಧಿಕಾರಿ ಯಾರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬರು ಏನೋ ಹೇಳಿಕೆ ಕೊಟ್ಟು ಪಕ್ಷಕ್ಕೆ ಮುಜುಗರ ತರುವ ರೀತಿ ಮಾತನಾಡಬಾರದು. ಮುಂದೆ ನಾವೂ ಇದೇ ರೀತಿ ಮಾತನಾಡಬೇಕಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದು ಎಂದರು.
ನಾನು ಮಾತನಾಡಿದರೆ ನೊಟೀಸ್ ಕೊಡುತ್ತಾರೆ. ಮುಖ್ಯಮಂತ್ರಿ ಮಗ ಹೇಳಿಕೆ ಕೊಟ್ಟರೆ ಸುಮ್ಮನೆ ಇರಬಾರದು. ಹೈಕಮಾಂಡ್ ಕ್ರಮ ತೆಗೆದುಕೊಂಡರೆ ಉತ್ತಮ ಎಂದರು.