ದಾವಣಗೆರೆ: ಶ್ರೀಗಂಧದ ಮರಗಳನ್ನು ಅಕ್ರಮವಾಗಿ ಕಡಿದು ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಯಿಂದ 2,00,000/- ರೂ ಮೌಲ್ಯದ ಶ್ರೀಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ಅ.17ರಂದು ಚನ್ನಗಿರಿ ತಾಲ್ಲೂಕು ಬಸವಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಬಸವಾಪಟ್ಟಣ-ದಾಗಿನಕಟ್ಟೆ ಗ್ರಾಮಗಳ ಮಧ್ಯದ ರಸ್ತೆಯಲ್ಲಿ ಕಾನೂನು ಬಾಹಿರವಾಗಿ ಶ್ರೀಗಂಧದ ಮರಗಳ ತುಂಡುಗಳನ್ನು ಎಲ್ಲಿಂದಲೂ ಕಡಿದು ಕಳ್ಳತನ ಮಾಡಿಕೊಂಡು ಬಂದು ಚನ್ನಗಿರಿ ತಾಲ್ಲೂಕು ಕಂಚುಗಾರನಹಳ್ಳಿ ಕ್ರಾಸ್ ಹತ್ತಿರ ಬೈಕ್‌ನಲ್ಲಿ ಶ್ರೀಗಂಧದ ತುಂಡುಗಳಿರುವ ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟುಕೊಂಡು ಮಾರಾಟ ಮಾಡಲು ಬಂದ ಖಚಿತ ಮಾಹಿತಿ ಮೇರೆಗೆ ಬಸವಾಪಟ್ಟಣ ಠಾಣೆ ಸರ್ಕಾರದ ಪರವಾಗಿ ಸ್ವ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದ ಆರೋಪಿಯನ್ನು ಪತ್ತೆ ಮಾಡಲು ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ಪರಮೇಶ್ವರ ಹೆಗಡೆ, ಡಿವೈಎಸ್ಪಿ ಸ್ಯಾಮ್ ವರ್ಗಿಸ್ ಮಾರ್ಗದರ್ಶನದಲ್ಲಿ ಸಿಪಿಐ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಪಿ.ಎಸ್.ಐ ಇಮ್ತಿಯಾಜ್ & ಭಾರತಿ ಜೆ.ಇ, ಹಾಗೂ ಅಧಿಕಾರಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಆರೋಪಿ ಇಸ್ಮಾಯಿಲ್ ಖಾನ್ (49) ಕೂಲಿ ಕೆಲಸ, ವಾಸ: ಬಸವಾಪಟ್ಟಣ ಗ್ರಾಮ, ಚನ್ನಗಿರಿ ತಾಲ್ಲೂಕು. ಇವನನ್ನು ಕಂಚುಗಾರನಹಳ್ಳಿ ಕ್ರಾಸ್‌ನಲ್ಲಿ ಬಂಧನ ಮಾಡಿದ್ದಾರೆ.
ಆರೋಪಿತನಿಂದ ಕೃತ್ಯಕ್ಕೆ ಬಳಸಿದ್ದ ಒಂದು ಮೋಟಾರ್ ಬೈಕ್ ಹಾಗೂ ಸುಮಾರು 2,00,000/- ರೂ ಮೌಲ್ಯದ 30 ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಆರೋಪಿ ಹಿನ್ನೆಲೆ: ಸದರಿ ಆರೋಪಿತನು ಈ ಹಿಂದೆ ದಾವಣಗೆರೆ ಗ್ರಾಮಾಂತರ ಠಾಣೆಯ 246/2006, ಬಸವಾಪಟ್ಟಣ ಠಾಣೆಯ 98/2020 ಪ್ರಕರಣಗಳಲ್ಲಿ ಶ್ರೀಗಂಧ ಸಾಗಟ ಹಾಗೂ ಬಸವಾಪಟ್ಟಣ ಠಾಣೆಯ ಗುನ್ನೆ ನಂ 115/2021 ರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.