ದಾವಣಗೆರೆ: ಮನೆ ಕೆಲಸಕ್ಕೆ ಬಂದಿದ್ದ ಮಹಿಳೆ ಕದ್ದಿದ್ದ 2.50 ಲಕ್ಷ ಮೌಲ್ಯದ ಚಿನ್ನದ ಸರವನ್ನು ಕೆಲವೇ ಗಂಟೆಯಲ್ಲಿ ಗಾಂಧಿನಗರ ಪೊಲೀಸರು ಪತ್ತೆ ಮಾಡಿ ವಾರಸುದಾರರಿಗೆ ಹಿಂತಿರುಗಿಸಿದ್ದಾರೆ.
ಅ. 17ರಂದು ದಾವಣಗೆರೆ ನಗರದ ದಾವಲ್ ಪೇಟೆಯಲ್ಲಿ ವಾಸವಿರುವ ನಿವೃತ್ತ ಶಾಲಾ ಶಿಕ್ಷಕಿಯಾದ ಬಿ ಜಯಮ್ಮ (68) ಮನೆಯ ಬೆಡ್ ರೂಂ ನಲ್ಲಿ ಇಟ್ಟಿದ್ದ 20 ಗ್ರಾಂ ಬಂಗಾರದ ಸರ ಕಳ್ಳತನವಾಗಿರುವ ಬಗ್ಗೆ ಗಾಂಧಿನಗರ ಠಾಣೆಗೆ ಬಂದು ದೂರು ಸಲ್ಲಿಸಿದ್ದರು. ನಂತರ ಗಾಂಧಿ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಉಪ ನಿರೀಕ್ಷಕ ಲಲಿತಮ್ಮ ಹಾಗೂ ಅಪರಾಧ ಸಿಬ್ಬಂದಿ ಮಹೇಶ ಕುಮಾರ ಮನೆಗೆ ಭೇಟಿ ನೀಡಿ ಪರಿಶೀಲಿಸಿದ್ದು, ದೂರುದಾರರು ನೀಡಿದ ಮಾಹಿತಿ ಮೇರೆಗೆ ಮನೆ ಕೆಲಸ ಮಾಡುತ್ತಿದ್ದ ಲಕ್ಷ್ಮಿ (26) ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಆ ಮಹಿಳೆಯು ಚಿನ್ನ ಕದ್ದಿರುವುದನ್ನು ಒಪ್ಪಿಕೊಂಡಿದ್ದಾರೆ. ಕದ್ದ 2.50 ಲಕ್ಷ ಮೌಲ್ಯದ 20 ಗ್ರಾಂ ಚಿನ್ನದ ಸರವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಚಿನ್ನದ ಸರ ಕಳೆದುಕೊಂಡಿದ್ದ ದೂರುದಾರರಾದ ಬಿ. ಜಯಮ್ಮ ಠಾಣೆಗೆ ಕರೆಯಿಸಿ 20 ಗ್ರಾಂ ಬಂಗಾರದ ಸರವನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಎಸ್ ಪಿ ಉಮಾ ಪ್ರಶಾಂತ್ ಗಾಂಧಿನಗರ ಪೊಲೀಸ್ ಠಾಣೆಯ ಅಪರಾಧ ಪಿಎಸ್ ಐ ಲಲಿತಮ್ಮ ಹಾಗೂ ಅಪರಾಧ ಸಿಬ್ಬಂದಿ ಮಹೇಶ್ ಕುಮಾರ ಕಾರ್ಯವನ್ನು ಪ್ರಶಂಸಿದ್ದಾರೆ.