ದಾವಣಗೆರೆ: ಅಡಿಕೆ ತೋಟದಲ್ಲಿ ಕಳೆ ಕೀಳುತ್ತಿದ್ದ ವೃದ್ಧೆ ಕಣ್ಣಿಗೆ ಕಾರದಪುಡಿ ಎರಚಿ ಸರ ಕಳ್ಳತನ ಮಾಡಿದ್ದ ಆರೋಪಿಗಳನ್ನು 24 ಗಂಟೆಯೊಳಗೆ ಪೊಲೀಸರು ಬಂಧನ ಮಾಡಿದ್ದಾರೆ.
30 ಗ್ರಾಂ ತೂಕದ ಚಿನ್ನದ ಸರ ಕಳ್ಳತನ
ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಹುಣಸಘಟ್ಟ ಗ್ರಾಮದಲ್ಲಿ ವೃದ್ಧೆಯೊಬ್ಬರ ಚಿನ್ನದ ಸರವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು. ಅಕ್ಟೋಬರ್ 14ರ ಸಂಜೆ ಹುಣಸಘಟ್ಟದ ಪಾರ್ವತಮ್ಮ(85) ತಮ್ಮದೇ ಅಡಿಕೆ ತೋಟದಲ್ಲಿ ಕಳೆ ಕೀಳುವಾಗ ಮುಖಕ್ಕೆ ಕಪ್ಪು ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬ ಹಿಂದಿನಿಂದ ಬಂದು ಕಣ್ಣಿಗೆ ಕಾರದಪುಡಿ ಎರಚಿ 30 ಗ್ರಾಂ ತೂಕದ ಚಿನ್ನದ ಸರ ದೋಚಿ ಇಬ್ಬರು ಬೈಕ್ನಲ್ಲಿ ಪರಾರಿಯಾಗಿದ್ದರು
ಸಂಬಂಧಿಗಳಿಂದಲೇ ಕೃತ್ಯ
ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ
ಸಿಪಿಐ ಸುನೀಲ್ಕುಮಾರ್ ಅವರು ವೃದ್ಧೆ ಪಾರ್ವತಮ್ಮ ಸಂಬಂಧಿ ದರ್ಶನ್ ಹಾಗೂ ವಿನಯ್ ವಿಚಾರಣೆ ನಡೆಸಿದಾಗ, ಲಕ್ಷಾಂತರ ರೂಪಾಯಿ ಸಾಲ ತೀರಿಸುವ ಸಲುವಾಗಿ ಸರಗಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಆರೋಪಿಗಳ ನ್ಯಾಯಾಂಗ ಬಂಧನ
ಬಂಧಿತರಿಂದ 3 ಲಕ್ಷ ಮೌಲ್ಯದ 30 ಗ್ರಾಂ ತೂಕದ ಬಂಗಾರದ ಚೈನ್ ಹಾಗೂ ಕೃತ್ಯಕ್ಕೆ ಬಳಸಿದ 30 ಸಾವಿರ ಮೌಲ್ಯದ ಮೋಟಾರ್ ಸೈಕಲ್ ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.
ಈ ಕಾರ್ಯಾಚರಣೆಯಲ್ಲಿ ಸುನೀಲ್ಕುಮಾರ್ ಜೊತೆ ಪಿಎಸ್ಐ ಕುಮಾರ್, ಎಲ್. ನಿರ್ಮಲಾ, ಎಎಸ್ಐ ಹರೀಶ್, ಸಿಬ್ಬಂದಿ ರಾಮಚಂದ್ರಪ್ಪ, ಹೇಮಾನಾಯ್ಕ, ಜಗದೀಶ್ ಭಾಗಿಯಾಗಿದ್ದರು.