ದಾವಣಗೆರೆ: ಪಿಎಂ ಸ್ವ-ನಿಧಿ (pmsvanidhi) ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ಮತ್ತು ಅವರ ಶ್ರೇಯೋಭಿವೃದ್ಧಿ ಹಾಗೂ ಅವರ ವ್ಯಾಪಾರ, ವ್ಯವಹಾರ ಸುಧಾರಿಸುವ ನಿಟ್ಟಿನಲ್ಲಿ ಕಿರು ಸಾಲ, ಬಡ್ಡಿ ಸಹಾಯಧನ ಮತ್ತು ವಿವಿಧ ಭದ್ರತಾ ಯೋಜನೆಗಳ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
90 ಸಾವಿರ ವರಗೆ ಸಾಲ
ಆತ್ಮ ನಿರ್ಭರ್ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ಥರು ಮೂರು ಹಂತಗಳಲ್ಲಿ ಸಾಲ ಮತ್ತು ಬಡ್ಡಿ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ರೂ.15 ಸಾವಿರ, ರೂ.25 ಸಾವಿರ ಮತ್ತು ರೂ.50 ಸಾವಿರ ರೂಪಾಯಿ ಕ್ರಮವಾಗಿ ಮೂರು ಹಂತಗಳಲ್ಲಿ 90 ಸಾವಿರ ವರೆಗೆ ಬ್ಯಾಂಕ್‍ಗಳ ಮೂಲಕ ಸಾಲ ಪಡೆಯಬಹುದಾಗಿದೆ. ಆಸಕ್ತ ಬೀದಿ ಬದಿ ವ್ಯಾಪಾರಿಗಳು ವೆಬ್‍ಸೈಟ್ https://pmsvanidhi.mohua.gov.in/ ಈಗಾಗಲೇ ಖಾತೆ ಹೊಂದಿರುವ ಬ್ಯಾಂಕ್‍ಗಳನ್ನು ಆಯ್ಕೆ ಮಾಡಿಕೊಂಡು ಕೂಡಲೇ ಅರ್ಜಿ ಸಲ್ಲಿಸಲು ಸೂಚಿಸಿದೆ.
30 ಸಾವಿರದವರೆಗೆ ಕ್ರೆಡಿಟ್ ಕಾರ್ಡ್
ಅದಷ್ಟೇ ಅಲ್ಲದೇ ಮೊದಲ ಎರಡು ಕಂತುಗಳಲ್ಲಿ ಸಾಲ ಪಡೆದು ನಿಯಮಿತವಾಗಿ ಮರುಪಾವತಿ ಮಾಡಿದ ಫಲಾನುಭವಿಗಳಿಗೆ ರೂ.30 ಸಾವಿರದವರೆಗೆ ಕ್ರೆಡಿಟ್ ಕಾರ್ಡ್ ಸೌಲಭ್ಯ ಒದಗಿಸಲಾಗುತ್ತದೆ. ಆನ್‍ಲೈನ್ ಅಥವಾ ಡಿಜಿಟಲ್ ವ್ಯಾಪಾರ ನಡೆಸುವ ಚಿಲ್ಲರೆ ವಹಿವಾಟುಗಳಿಗೆ ರೂ.1200 ಮತ್ತು ಸಗಟು ವ್ಯಾಪಾರಿಗಳಿಗೆ ರೂ.400 ಕ್ಯಾಶ್ ಬ್ಯಾಕ್ ಸೌಲಭ್ಯ ಒದಗಿಸಲಾಗಿದೆ.
ಪಿಎಂ ಸ್ವ-ನಿಧಿ ಯೋಜನೆಯ ಸಾಲ ಸೌಲಭ್ಯ
ಅರ್ಹ ಬೀದಿ ಬದಿ ವ್ಯಾಪಾರಸ್ಥರಿಗೆ ಪಿಎಂ ಸುರಕ್ಷಾ, ಪಿಎಂ ಜೀವನ್ ಜ್ಯೋತಿ ಭೀಮಾ ಯೋಜನೆ, ಪಿಎಂ ಶ್ರಮ ಯೋಗಿ ಮಾನಧನ್ ಯೋಜನೆ, ಒನ್ ನೇಷನ್, ಒನ್ ರೇಷನ್ ಕಾರ್ಡ್ ಸೇರಿದಂತೆ ವಿವಿಧ 8 ಭದ್ರತಾ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಜಿಲ್ಲೆಯ ಅರ್ಹ ಬೀದಿ ಬದಿ ವ್ಯಾಪಾರಸ್ಥರ ಕಾರ್ಡ್ ಹೊಂದದೆ ಇರುವವರು, ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ, ಹರಿಹರ ನಗರಸಭೆಯಲ್ಲಿ, ಮಲೆಬೆನ್ನೂರು ಚನ್ನಗಿರಿ ಮತ್ತು ಹೊನ್ನಾಳಿ ಪುರಸಭೆ ಹಾಗೂ ಜಗಳೂರು ನ್ಯಾಮತಿ ತಾಲ್ಲೂಕಿನ ಪಟ್ಟಣ ಪಂಚಾಯತಿಗಳಲ್ಲಿ ಕಾರ್ಡ್ ಅಥವಾ ಪ್ರಮಾಣ ಪತ್ರ ಪಡೆಯಲು ಅವಕಾಶ ಕಲ್ಪಿಸಿದೆ. ಅರ್ಹ ಬೀದಿ ಬದಿ ವ್ಯಾಪಾರಿ ಫಲಾನುಭವಿಗಳು ಪಿಎಂ ಸ್ವ-ನಿಧಿ ಯೋಜನೆಯ ಸಂಪೂರ್ಣ ಸೌಲಭ್ಯವನ್ನು ಅದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ