ದಾವಣಗೆರೆ: ಜಿಲ್ಲೆಯಲ್ಲಿ ನಕಲಿ ಚಿನ್ನದ ನಾಣ್ಯ ಮಾರಾಟ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದು, 8 ಲಕ್ಷ ಹಣ ಪಡೆದು ವಂಚಿಸಿದ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಪುರಾತನ ಕಾಲದ ಬಂಗಾರದ ಬಿಲ್ಲೆಗಳೆಂದು ವಂಚನೆ
ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೋಮರನಹಳ್ಳಿ ಗ್ರಾಮದ ಕೆರೆಯ ಬಳಿ ದಿನಾಂಕ 04/02/2025 ರಂದು ಸುಧಾಕರ, ಮಾರುತಿ ನಗರ, ಶ್ರೀನಿವಾಸಪುರ ಟೌನ್, ಕೋಲಾರ ಜಿಲ್ಲೆ ಎಂಬುವರಿಗೆ ಆರೋಪಿಯು ಭೂಮಿಯನ್ನು ಉಳುಮೆ ಮಾಡುವಾಗ ಪುರಾತನ ಕಾಲದ ಬಂಗಾರದ ಬಿಲ್ಲೆಗಳು ಸಿಕ್ಕಿವೆ. ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿ ದೂರುದಾರನಿಂದ 8 ಲಕ್ಷ ರೂ. ಹಣವನ್ನು ಪಡೆದು ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ ಮೋಸ ಮಾಡಿದ್ದರು.
ಈ ಬಗ್ಗೆ ದಿನಾಂಕ:-13-03-2025 ರಂದು ನೀಡಿದ ದೂರಿನ ಮೇರೆಗೆ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿದ್ದರು. ಎಸ್ಪಿ ಉಮಾ ಪ್ರಶಾಂತ, ಎಎಸ್ಪಿ ಪರಮೇಶ್ವರ ಹೆಗಡೆ, ಡಿವೈಎಸ್ಪಿ ಬಸವರಾಜ್ ಬಿ.ಎಸ್ ಮಾರ್ಗದರ್ಶನದಲ್ಲಿ ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ , ಹಾರುನ್ ಅಖರ್. ಚಿದಾನಂದಪ್ಪ,ಎಸ್.ಬಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಆರೋಪಿ ಬಂಧನ
ಈ ತಂಡವು ಪ್ರಕರಣದ ಆರೋಪಿ ಲಕ್ಷ್ಮಪ್ಪ (60) ಕೂಲಿ ಕೆಲಸ ಸ್ವಂತ ಊರು: ನಲ್ಲೂರು ಕ್ಯಾಂಪ್ ಹಾಲಿ ವಾಸ॥ ಹಡೋನಹಳ್ಳಿ ಗ್ರಾಮ, ಶಿವಮೊಗ್ಗ ತಾಲೂಕು ಈತನನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತನಿಂದ ಒಟ್ಟು 5,50,000 ರೂ. ನಗದು ಹಣವನ್ನು ಅಮಾನತ್ತು ಪಡಿಸಿಕೊಂಡು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣ ಪತ್ತೆ ಮಾಡಿದ ತಂಡಕ್ಕೆ ಎಸ್ಪಿ ಉಮಾಪ್ರಶಾಂತ್ ಪ್ರಶಂಸಿದ್ದಾರೆ.



