ದಾವಣಗೆರೆ: ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ರೆ ಮಾತ್ರವೇ ಐದೂ ಗ್ಯಾರಂಟಿ ಯೋಜನೆ (guarantee scheme) ಸೌಲಭ್ಯ ಕುಟುಂಬಕ್ಕೆ ಸಿಗುವಂತೆ ಮಾಡಬೇಕು ಎಂದು ಜಿಲ್ಲೆಯ ಕಾಂಗ್ರೆಸ್ ಶಾಸಕರೊಬ್ಬರು ಆಗ್ರಹಿಸಿದ್ದಾರೆ.
ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿದ್ರೆ ಮಾತ್ರ ಐದು ಗ್ಯಾರಂಟಿ ನೀಡುತ್ತೇವೆ ಎನ್ನುವ ನಿಯಮವನ್ನು ಸರ್ಕಾರ ಮಾಡಬೇಕು ಎಂದು ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಯಕೊಂಡ ಕಾಂಗ್ರೆಸ್ ಶಾಸಕ ಕೆ.ಎಸ್.ಬಸವಂತಪ್ಪ ಸಲಹೆ ನೀಡಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಸಂಖ್ಯೆ ಕಡಿಮೆ ಆಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಹೆಚ್ಚಳ ಆಗಲು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ. ಐದು ಗ್ಯಾರಂಟಿ ಪಡೆಯುವ ಫಲಾನುಭವಿಗಳು ತಮ್ಮ ಮಕ್ಕಳ ಸರ್ಕಾರಿ ಶಾಲೆಗೆ ಸೇರಿಸಬೇಕು ಎನ್ನುವ ನಿಯಮ ಮಾಡಬೇಕು ಎಂದು ಹೇಳಿದ್ದಾರೆ.
ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದರೆ ಮಾತ್ರ ಗ್ಯಾರಂಟಿ ನೀಡುತ್ತೇವೆ ಎಂದರೆ ಒಳ್ಳೆಯದು ಎಂದು ಸಿಎಂಗೆ ಮನವಿ ಮಾಡುತ್ತೇನೆ. ಆಗ ಹಾಜರಾತಿ ಸಂಖ್ಯೆ ಹೆಚ್ಚಳ ಆಗಬಹುದು. ಎರಡು ಸಾವಿರ ಬರುತ್ತೆ ಸರ್ಕಾರಿ ಶಾಲೆಗೆ ಹಾಕಿ ಅಂತಾ ಹೇಳುತ್ತಾರೆ. ಸರ್ಕಾರಿ ಶಾಲೆಗೆ ಯಾರು ಸೇರಿಸುತ್ತಾರೋ ಅವರಿಗೆ ಗ್ಯಾರಂಟಿ ಯೋಜನೆಗಳಿಗೆ ಮೊದಲ ಆದ್ಯತೆ ನೀಡೋಣ ಎಂದು ಭಾಷಣದಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ವಿಧಾನಸಭೆ ಚುನಾವಣೆಯ ವೇಳೆ ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ, ಅನ್ನಭಾಗ್ಯ ಹಾಗೂ ಶಕ್ತಿ ಹೆಸರಿನಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ ಅಧಿಕಾರಕ್ಕೆ ಏರಿತ್ತು. ಬಳಿಕ ಯೋಜನೆ ಜಾರಿ ಮಾಡಿತ್ತು.



