ಡಿವಿಜಿ ಸುದ್ದಿ, ದಾವಣಗೆರೆ: ಕಾಯಿಲೆಗೆ ತುತ್ತಾದವರಿಗೆರ ನಿಮ್ಮ ಜೊತೆ ನಾವು ಇದ್ದೀವಿ ಎನ್ನುವ ಧೈರ್ಯ ತುಂಬುವುದರ ಜೊತೆಗೆ ಮಾನಸಿಕವಾಗಿ ಧೈರ್ಯ ತುಂಬುವುದು ಮುಖ್ಯ ಎಂದು ನಟ ವಿಜಯ ರಾಘವೇಂದ್ರ ತಿಳಿಸಿದರು.
ವಿಶ್ವ ವಿರಳ ರೋಗ ದಿನಾಚರಣೆ ಅಂಗವಾಗಿ ಹಿಮೊಫಿಲಿಯಾ ಸೊಸೈಟಿ ವತಿಯಿಂದ ನಗರದಲ್ಲಿ ಇಂದು ಆಯೋಜಿಸಿದ್ದ ವಾಕಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಅತಿ ವಿರಳವಾಗಿ ಬರುವಂತಹ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಪೋಷಕರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ ವಹಿಸಿ, ಗರ್ಭಿಣಿಯಾದಾಗಲೇ ಮಗುವಿಗೆ ಚಿಕಿತ್ಸೆ ಕೊಡಿಸುವಂತಹ ಕೆಲಸ ಮಾಡಬೇಕು. ಈ ವಾಕಥಾನ್ ನಲ್ಲಿ ಭಾಗವಹಿಸಿದ್ದು ನನಗೆ ಸಂತೋಷವಾಗಿದೆ ಎಂದರು.

ಕಾರ್ಯಕ್ರಮದಲ್ಲಿ 7ಸಾವಿರ ರೋಗಕ್ಕೆ 7 ಸಾವಿರ ಮೀಟರ್ ನಡಿಗೆ ಎಂಬ ಘೋಷ ವಾಕ್ಯದೊಂದಿಗೆ ವಾಕಥಾನ್ ಹಮ್ಮಿಕೊಳ್ಳಲಾಗಿತ್ತು. ಈ ವಾಕಥಾನ್ ನಲ್ಲಿ ನೂರಾರು ಯುವಕ-ಯುವತಿಯರು ಭಾಗವಹಿಸಿದ್ದರು.
ಹಿಮೊಫಿಲಿಯಾ ಸೊಸೈಟಿಯಿಂದ ಪ್ರಾರಂಭಗೊಂಡು ವಾಕಥಾನ್ ಎಸ್‍ಎಸ್‍ಲೇಔಟ್ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತ, ಪಿಬಿ ರಸ್ತೆ, ಎವಿಕೆ, ರಾಮ್ ಆ್ಯಂಡ್ ಕೋ ಸರ್ಕಲ್ ಮೂಲಕ ಹಿಮೊಫಿಲಿಯಾ ಸೊಸೈಟಿಗೆ ಜಾಥ ತಲುಪಿತು.
ಈ ರೋಗಗಳು ಅನುವಂಶೀಯವಾಗಿದ್ದು, ವೈದ್ಯಕೀಯ ವೈಜ್ಞಾನಿಕ ಸಂಶೋಧನೆಗಳಿಗೆ ಸರ್ಕಾರ ಆದ್ಯತೆ ನೀಡಬೇಕು. ಸ್ವಯಂ ಸೇವಾ ಸಂಸ್ಥೆಗಳನ್ನು ರಚಿಸಿ ಅವರ ಹಕ್ಕಿನ ರಕ್ಷಣೆಗಾಗಿ ಸಂಘಟಿತರಾಗಲು ಪ್ರೋತ್ಸಾಹ ನೀಡಲು ಸರ್ಕಾರದ ಗಮನ ಸೆಳೆಯಲಾಯಿತು.
ನಟ ವಿಜಯ್ ರಾಘವೇಂದ್ರ ಅವರಿಗೆ ಹಿಮೊಫಿಲಿಯಾ ಸೊಸೈಟಿ ವತಿಯಿಂದ ಸನ್ಮಾನ ಹಮ್ಮಿಕೊಂಡಿದ್ದು, ಸಂಸದ ಜಿ ಎಂ ಸಿದ್ದೇಶ್ವರ್, ಎಸ್ ಪಿ ಹನುಮಾಂತರಾಯ, ಮೇಯರ್ ಅಜಯ್ ಕುಮಾರ್ ಭಾಗಿಯಾಗಿದ್ದರು.



