ದಾವಣಗೆರೆ: ಎಲೆಕ್ಟ್ರಾನಿಕ್ಸ್ ಅಂಗಡಿಗೆ ಕನ್ನಾ ಹಾಕಿದವರನ್ನು ಹೊನ್ನಾಳಿ ಪೊಲೀಸರು ಬಂಧನ ಮಾಡಿದ್ದು, ಆರೋಪಿಗಳಿಂದ 6.78 ಲಕ್ಷ ಮೌಲ್ಯದ ಮಾಲನ್ನು ವಶಕ್ಕೆ ಪಡೆಯಲಾಗಿದೆ.
ದಿನಾಂಕ 03.08.2025 ರಂದು ರಾತ್ರಿ ಸಮಯದಲ್ಲಿ ಹೊನ್ನಾಳಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಶ್ರೀ ಶಿವು ಎಂಟರ್ ಪ್ರೈಸಸ್ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಅಂಗಡಿ ಹಿಂದಿನ ಕಿಟಕಿಯ ಸರಳನ್ನು ಯಾರೋ ಕಳ್ಳರು ಬೆಂಡ್ ಮಾಡಿ ಒಳಗೆ ಪ್ರವೇಶಿಸಿ 5.5 ಲಕ್ಷ ಮೌಲ್ಯದ ಮೊಬೈಲ್ ಗಳು, ಮಿಕ್ಸಿರ್ ಗಳು, ಹೋಂ ಥಿಯೇಟರ್ ಗಳು ಇತರೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ವಿರೇಶಪ್ಪ ಸಿ ಎಂಬುವವರು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣದಲ್ಲಿ ಮಾಲು ಮತ್ತು ಆರೋಪಿಗಳ ಪತ್ತೆ ಮಾಡಲು ಎಸ್ಪಿ ಉಮಾ ಪ್ರಶಾಂತ್ ಮತ್ತು ಎಎಸ್ಪಿ ಪರಮೇಶ್ವರ ಹೆಗಡೆ, ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ ಹೊನ್ನಾಳಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ ಹೆಚ್ ಮತ್ತು ಸಿಬ್ಬಂದಿ ಒಳಗೊಂಡ ತಂಡವ ರಚನೆ ಮಾಡಲಾಗಿತ್ತು.
ಈ ತಂಡವು ಕಾರ್ಯಚರಣೆ ನಡೆಸಿ ಅಪರಾಧ ನಡೆದ ಸ್ಥಳದಲ್ಲಿ ದೊರೆತ ಖಚಿತ ಸಾಕ್ಷ್ಯಗಳ ಸಹಾಯದಿಂದ ಪ್ರಕರಣದ ಆರೋಪಿ 1)ಸುನೀಲ್ ಕುಮಾರ (23), ಮುಕ್ತೇನಹಳ್ಳಿ ಗ್ರಾಮ, 2)ಗಿರೀಶ ಟಿ.ಎನ್ (25), ನಿಟ್ಟೂರು ಗ್ರಾಮ, 3)ಅನಿಲ್ ಕುಮಾರ್ ಬಿ.ಸಿ (21) ಬೆಳ್ಳೂಡಿ ಗ್ರಾಮ, 4)ರಾಕೇಶ ಬಿ.ಎ ( 23) ಭಾನುವಳ್ಳಿ ಗ್ರಾಮ ಇವರನ್ನು ಬಂಧಿಸಲಾಗಿದೆ.
6.78 ಲಕ್ಷ ಮೌಲ್ಯದ ಮಾಲು ವಶ
ಆರೋಪಿತರು ಕಳುವು ಮಾಡಿದ್ದ ಒಟ್ಟು 6.78 ಲಕ್ಷ ಮೌಲ್ಯದ 33 ಮೊಬೈಲ್ ಗಳು, 06 ಮಿಕ್ಸರ್-ಗ್ರೈಂಡರ್ ಗಳು, 4 ಹೋಂ ಥಿಯೇಟರ್ ಗಳು, 1 ಗೀಸರ್, 1 ಎಲೆಕ್ಟ್ರಿಕ್ ಸ್ಟೌ, 1 ಸೆಟ್ ಕುಕ್ ವೇರ್ ಗಳನ್ನು ಮತ್ತು ಆರೋಪಿತರು ಕಳ್ಳತನ ಕೃತ್ಯಕ್ಕೆ ಉಪಯೋಗಿಸಿದ 3 ಲಕ್ಷ ಮೌಲ್ಯದ ಓಮಿನಿ, ಇತರೆ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿ ಹಿನ್ನೆಲೆ: ಆರೋಪಿ ರಾಕೇಶ್ ಎಂಬುವವನ ಮೇಲೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ 2023 ರಲ್ಲಿ ಕೊಲೆಗೆ ಯತ್ನ ಸಂಬಂಧ ಪ್ರಕರಣ ದಾಖಲಾಗಿರುತ್ತದೆ. ಪ್ರಕರಣವನ್ನು ಪತ್ತೆ ಹಚ್ಚಿ ಮಾಲು ಮತ್ತು ಆರೋಪಿತರನ್ನು ಹಿಡಿಯುವಲ್ಲಿ ಯಶಸ್ವಿಯಾದ ತಂಡಕ್ಕೆ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.



