ಡಿವಿಜಿಸುದ್ದಿ.ಕಾಂ , ದಾವಣಗೆರೆ: ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಮೋಟರ್ ವಾಹನ ಕಾಯ್ದೆಯ ದಂಡ ಪ್ರಮಾಣವನ್ನು ಕಡಿಮೆಗೊಳಿಸುವಂತೆ ಮತ್ತು ಕಾಯ್ದೆ ಜಾರಿಗೆ ಸಮಯಾವಕಾಶ ನೀಡಬೇಕೆಂದು ಒತ್ತಾಯಿಸಿ ದಾವಣಗೆರೆಯ ವಿವಿಧ ಸಂಘಟನೆಯ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾಕ್ಕೆ ಮನವಿ ಸಲ್ಲಿಸಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ದಿನೇಶ್ ಶೆಟ್ಟಿ, ಜಿಲ್ಲಾ ವರದಿಗಾರ ಕೂಟದ ಅಧ್ಯಕ್ಷ ಬಿ.ಎನ್. ಮಲ್ಲೇಶ್, ಕಮ್ಯೂನಿಸ್ಟ್ ಪಕ್ಷದ ಮುಖಂಡ ಎಚ್.ಕೆ. ರಾಮಚಂದ್ರಪ್ಪ, ಕಾಂಗ್ರೆಸ್ ಯುವ ಘಟಕದ ಮುಖಂಡ ಸಾಗರ್ ಎಲ್.ಎಚ್, ರೈತ ಮುಖಂಡ ಹುಚ್ಚವನಹಳ್ಳಿ ಮಂಜುನಾಥ್, ವಕೀಲ ಮುಸ್ತಾಕ್ ಅಹ್ಮದ್ ಮೌಲಿ, ಲಾರಿ ಮಾಲೀಕ ಸಂಘದ ಸೈಯದ್ ಸೈಫುಲ್ಲಾ, ಲಯನ್ಸ್ ಕ್ಲಬ್ ನ ಮಂಜುನಾಥ್ ಸ್ವಾಮಿ, ರೋಟರಿ ಸಂಸ್ಥೆಯ ವಿಶ್ವಜಿತ್ ಜಾದವ್ , ಲೆಕ್ಕ ಪರಿಶೋಧಕ ಉಮೇಶ್ ಶೆಟ್ಟಿ, ಬಸ್ ಮಾಲೀಕ ಸಂಘದ ಉಮೇಶ್, ತ್ರಿಚಕ್ರ ವಾಹನ ಸಂಘದ ಅಧ್ಯಕ್ಷ ಪಳಿನಿ ಸ್ವಾಮಿ,ಶ್ರೀಕಾಂತ್ ಬಗರೆ, ಬಾಡಾ ಕ್ರಾಸ್ ಶ್ರೀವಾಸ್, ವಿದ್ಯಾರ್ಥಿ ಮುಖಂಡ ಮುಜಾಹಿದ್ ಸೇರಿದಂತೆ ಅನೇಕ ಮುಖಂಡರ ಸಹಿಯೊಂದಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಂಚಾರಿ ನಿಯಮ ಪಾಲಿಸುವ ಬಗ್ಗೆ ನಮ್ಮ ಅಭ್ಯಂತರವಿಲ್ಲ. ಆದರೆ, ನಿಯಮ ಉಲ್ಲಂಘಿಸಿದವರಿಗೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸುತ್ತಿರುವುದರಿಂದ ಸಾಮಾನ್ಯ ಜನರಿಗೆ ಹೊರೆಯಾಗಿದೆ. ಈ ನೂತನ ಕಾಯ್ದೆ ಜಾರಿಯ ಬಗ್ಗೆ ಪೊಲೀಸರು ಜಾಗೃತಿ ಮೂಡಿಸಲು ಕನಿಷ್ಟ ಒಂದು ವರ್ಷವಾದರೂ, ಕಾಲಾವಕಾಶ ನೀಡಬೇಕು. ಒಂದು ವರ್ಷದ ನಂತರ ದಂಡದ ಮೊತ್ತ ಎಷ್ಟಿರಬೇಕು ಎಂಬುದನ್ನು ನಿರ್ಧರಿಸಿ ಸಾಮಾನ್ಯ ಜನರಿಗೆ ಹೊರೆಯಾಗದಂತೆ ದಂಡ ವಿಧಿಸಬೇಕೆಂದು ಒತ್ತಾಯಿಸಿದರು.
ನೂತನ ಕಾಯ್ದೆಯಿಂದ ವಾಹನ ಮಾಲೀಕರು ಮತ್ತು ಚಾಲಕರು ಭಯಭೀತರಾಗಿದ್ದಾರೆ. ಕಾಯ್ದೆ, ಕಾನೂನುಗಳು ಜನರನ್ನು ತಿದ್ದಬೇಕೇ ವಿನಃ, ಜನರನ್ನೇ ಶೋಷಣೆ ಮಾಡುವಂತೆ ಇರಬಾರದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾಯ್ದೆಯನ್ನು ಮರು ಪರಿಶೀಲಿಸಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ: 9844460336, 7483892205



