ದಾವಣಗೆರೆ: ಮಳೆ ಹೆಚ್ಚಾಗಿದ್ದು ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಜಿಲ್ಲೆಯ ನದಿ ಪಾತ್ರದ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅಧಿಕಾತರಿಗಳು ಮುನ್ನೆಚ್ಚರಿಕೆ ವಹಿಸಬೇಕು. ಇದಲ್ಲದೆ, ಜಿಲ್ಲೆಯಲ್ಲಿ ಬೇರೆ ಕಡೆಗೆ ಹೋಲಿಕೆ ಮಾಡಿದ್ರೆ ಯೂರಿಯಾ ಕೊರತೆ ಇಲ್ಲ. ಆದರೂ, ಮಾರಾಟಗಾರರು ಯೂರಿಯಾ ದಾಸ್ತಾನು ಮಾಡಿದ್ರೆ ಜಪ್ತಿ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ಮುಂಗಾರು ಮಳೆ ಬೇಗ ಬಂದಿದ್ದರಿಂದ ಸಹಜವಾಗಿಯೇ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಜಿಲ್ಲೆಗೆ 12.5 ಸಾವಿರ ಟನ್ ಯೂರಿಯಾ ಬರುತ್ತಿದ್ದಂತೆ ಎಲ್ಲ ಕಡೆ ಸರಬರಾಜು ಆಗಲಿದೆ. ಗೊಬ್ಬರ ವಿತರಕರು, ಮಾರಾಟಗಾರರು ದಾಸ್ತಾನು ಮಾಡಿಟ್ಟಿರುವ
ರಸಗೊಬ್ಬರ ಜಪ್ತಿ ಮಾಡಲಾಗುತ್ತಿದೆ. ದಾವಣಗೆರೆ,
ಹೊನ್ನಾಳಿಯಲ್ಲಿ ಸೀಜ್ ಮಾಡಿ, ಯೂರಿಯಾ ವಿತರಣೆ ಮಾಡುತ್ತಿದ್ದಾರೆ ಎಂದರು.
ಲಿಂಕ್ ಬಗ್ಗೆ ದೂರು ಬಂದ್ರೆ ಕ್ರಮ
ದಯವಿಟ್ಟು ಯಾವುದೇ ಗೊಬ್ಬರ ವಿತರಕರು, ಮಾರಾಟಗಾರರು ಸ್ಟಾಕ್‌ಮಾಡಬೇಡಿ. ಯೂರಿಯಾಗೆ ಲಿಂಕ್ ಗೊಬ್ಬರ ವಿತರಣೆ ಬಗ್ಗೆ ರೈತರು ದೂರು ಕೊಟ್ಟರೆ ಕ್ರಮಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೀವಾಲಾ ಅಧಿಕಾರಿಗಳ ಸಭೆ ನಡೆಸಿದ್ದಾರೆಂಬುದು ವಿಪಕ್ಷದವರ ಸೃಷ್ಟಿ ಅಷ್ಟೇ. ರಾಜ್ಯ ಉಸ್ತುವಾರಿಗಳು ಶಾಸಕರು, ಸಚಿವರನ್ನು ಕರೆಸಿ ಮಾಡಿದ್ದಾರೆ. ಜಿಲ್ಲಾವಾರು ಏನೇನು ಅಭಿವೃದ್ಧಿ ಕೆಲಸಗಳಾಗಿವೆಯೆಂದು ಸಭೆ ಮಾಡಿದ್ದಾರೆ. ಈ
ವಾರವೂ ಸಭೆಕರೆದಿದ್ದಾರೆ ಎಂದರು.
ಪ್ರವಾಹ ಪರಿಸ್ಥಿತಿ; ಮುನ್ನೆಚ್ಚರಿಕೆ ವಹಿಸಿ
ಮಲೆನಾಡು ಭಾಗದಲ್ಲಿ, ಘಟ್ಟ ಪ್ರದೇಶದಲ್ಲಿ ಜೋರು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿಯಲ್ಲಿ ಸಾಕಷ್ಟು ನೀರು ಹರಿದು ಬರುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿನದು ಹಾದು ಹೋಗಿರುವ ಹೊನ್ನಾಳಿ, ಹರಿಹರ ತಾಲೂಕುಗಳ ನದಿ ಪಾತ್ರದ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.