ದಾವಣಗೆರೆ: ಅಪ್ರಾಪ್ತ ಬಾಲಕ ವಾಹನ ಚಾಲನೆ ಮಾಡಿದ್ದು, ಟ್ರಾಫಿಕ್ ಪೊಲೀಸರು ವಾಹನ ಮಾಲೀಕರಿಗೆ 25 ಸಾವಿರ ದಂಡ ವಿಧಿಸಿದ್ದಾರೆ.
ದಾವಣಗೆರೆ ನಗರದಲ್ಲಿ ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದನ್ನು ತಡೆಯಲು ಎಸ್ಪಿ ಉಮಾ ಪ್ರಶಾಂತ್ ಸೂಚನೆಯಂತೆ ಡಿವೈಎಸ್ಪಿ ಶರಣಬಸವೇಶ್ವರ ಬೀಮರಾವ್ ಮಾರ್ಗದರ್ಶನದಲ್ಲಿ ದಿನಾಂಕ 20-05-2025ರಂದು ಸಂಜೆ ಸಮಯದಲ್ಲಿ ದಾವಣಗೆರೆ ಟ್ರಾಫಿಕ್ ಪೊಲೀಸ್ ಸಿಪಿಐ ನಲವಾಗಲು ಮಂಜುನಾಥ್ ನೇತೃತ್ವದಲ್ಲಿ ದಕ್ಷಿಣ ಸಂಚಾರ ಠಾಣೆ ಪಿಎಸ್ಐ ನಿರ್ಮಲ ಡಿ ಹೆಚ್ ಹಾಗೂ ಸಿಬ್ಬಂದಿಯಾದ ಜಗದೀಶ್ ಸಿಬ್ಬಂದಿಯೊಂದಿಗೆ ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.
ನ್ಯಾಯಾಲಯಕ್ಕೆ ದೋಷಾರೋಪ ಪತ್ರ ಸಲ್ಲಿಕೆ
ಆ ಸಮಯದಲ್ಲಿ ನಗರದ ಡೆಂಟಲ್ ಕಾಲೇಜ್ ಬಳಿ ಆಕ್ಟಿವ್ ಹೊಂಡ ಬೈಕ್ ಅನ್ನು ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಸಾರ್ವಜನಿಕ ರಸ್ತೆ ಮೇಲೆ ಚಲಾಯಿಸಲು ನೀಡಿದ್ದರ ಬಗ್ಗೆ ಸದರಿ ಆಕ್ಟಿವ್ ಹೊಂಡ ಬೈಕ್ ಅನ್ನು ಜಪ್ತು ಪಡಿಸಿಕೊಂಡು ದಾವಣಗೆರೆ ದಕ್ಷಿಣ ಸಂಚಾರ ಠಾಣೆಯಲ್ಲಿ ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಮಾನ್ಯ 3 ನೇ ASCJ & JMFC ದಾವಣಗೆರೆ ನ್ಯಾಯಾಲಯಕ್ಕೆ ಆಕ್ಟಿವ್ ಹೊಂಡ ಬೈಕ್ ಮಾಲೀಕರ ಮೇಲೆ ದೋಷಾರೋಪಣೆ ಪತ್ರ ಸಲ್ಲಿಸಿದ್ದು, ಮಾನ್ಯ ನ್ಯಾಯಾಲಯವು ದಿನಾಂಕ 27-05-2025 ರಂದುಆರೋಪಿ ಆಕ್ಟಿವ್ ಹೊಂಡ ಬೈಕ್ ಮಾಲೀಕರು ತಮ್ಮ ಆಕ್ಟಿವ್ ಹೊಂಡ ಬೈಕ್ ಅನ್ನು ಅಪ್ರಾಪ್ತ ವಯಸ್ಕನಿಗೆ ಚಾಲನೆ ಮಾಡಲು ಕೊಟ್ಟಿದ್ದಕ್ಕೆ ಆಕ್ಟಿವ್ ಹೊಂಡ ಬೈಕ್ ಮಾಲೀಕರಿಗೆ 25,000/- ರೂಗಳ ದಂಡವನ್ನು ವಿಧಿಸಿರುತ್ತದೆ.
ಕಡ್ಡಾಯವಾಗಿ ನಿಯಮ ಪಾಲಿಸುವಂತೆ ಸೂಚನೆ
ಆದ್ದರಿಂದ ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಗೆ ವಾಹನ ಚಾಲನೆ ಮಾಡಲು ಕೊಡುವ ಪಾಲಕರಿಗೆ / ವಾಹನ ಮಾಲೀಕರಿಗೆ ದಾವಣಗೆರೆ ಸಂಚಾರ ಪೊಲೀಸರು ಬಿಸಿ ಮುಟ್ಟಿಸಿ ಅರಿವು ಮೂಡಿಸಿದ್ದಾರೆ. ಇದೇ ರೀತಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ಸವಾರರ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ಕ್ರಮ ಜರುಗಿಸಲಾಗುವುದು ಹಾಗೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪೊಲೀಸ್ ಅಧೀಕ್ಷಕರು ತಿಳಿಸಿರುತ್ತಾರೆ.