ದಾವಣಗೆರೆ: ಬಸವ ಜಯಂತಿಯೊಂದಿಗೆ ರೇಣುಕಾಚಾರ್ಯ ಜಯಂತಿ ಆಚರಣೆ ಮಾಡುವಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕ ಹೊರಡಿಸಿದ್ದ ಸುತ್ತೋಲೆ ಹಿಂಪಡೆದು ಪ್ರತ್ಯೇಕ ಬಸವ , ರೇಣುಕಾಚಾರ್ಯ ಜಯಂತಿ ಆಚರಣೆ ಮಾಡುವಂತೆ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸೂಚನೆ ನೀಡಿದ್ದಾರೆ.
ಹಿಂದಿನಂತೆ ಬಸವ, ರೇಣುಕಾಚಾರ್ಯರು ಜಯಂತಿ
ಈ ಹಿಂದಿನಂತೆ ಬಸವ ಜಯಂತಿ, ರೇಣುಕಾಚಾರ್ಯರು ಹಾಗೂ ಇತರರ ಜಯಂತಿಯನ್ನು ಪ್ರತ್ಯೇಕವಾಗಿ ಆಚರಿಸಲು ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳಿಗೆ ಸೂಚನೆ ಕೊಡಲಾಗಿದೆ. ಎರಡು ಜಯಂತಿಯನ್ನು ಒಂದೇ ದಿನ ಆಚರಣೆಗೆ ಬಸವ ಪರ ಸಂಘಟನೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ರಾಜ್ಯ ಘಟಕದ ಕಾರ್ಯದರ್ಶಿ ಎಚ್.ಎಂ. ರೇಣುಕಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವಿವಾದ ಇಲ್ಲಿಗೆ ಕೊನೆಗೊಳಿಸಿ ಸಮಾಜದ ಏಕತೆ ಪ್ರದರ್ಶಿಸಬೇಕು. ವೀರಶೈವ ಲಿಂಗಾಯತ ಸಮಾಜದ ಒಗ್ಗಟ್ಟು ಮತ್ತು ಸಾಮರಸ್ಯ ಕಾಪಾಡುವ ದೃಷ್ಟಿಯಿಂದ ಮಹಾಸಭಾ ರಾಜ್ಯ ಘಟಕ ಹೊರಡಿಸಿರುವ ಸುತ್ತೋಲೆ ಹಿಂಪಡೆಯಲು ಶಾಮನೂರು ಶಿವಶಂಕರಪ್ಪ ಸೂಚಿಸಿದ್ದಾರೆ ಎಂದು ರೇಣುಕಪ್ರಸನ್ನ ತಿಳಿಸಿದ್ದಾರೆ.