ದಾವಣಗೆರೆ: ಜಿಲ್ಲೆಯ ನ್ಯಾಮತಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ದರೋಡೆ ( bank Robbery) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ಬಂಧಿಸಲಾಗಿದೆ. ತಮಿಳುನಾಡಿನ ವಿಜಯಕುಮಾರ (32) ಅಜಯ್ ಕುಮಾರ್ (36) ಸ್ಥಳೀಯ ನಿವಾಸಿಗಳಾದ ಮಂಜುನಾಥ (40) ಅಭಿಷೇಕ್ (28) ಚಂದ್ರಶೇಖರ್ (34) ಬಂಧನ ವಾಗಿದ್ದು, ಬಂಧಿತರಿಂದ 220 ಗ್ರಾಮ (22 ಕೆಜಿ) ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ತಮಿಳುನಾಡಿನ ಪರಮಾನಂದ ಎಂಬಾತನಿಗಾಗಿ ಹುಡುಕಾಟ ನಡೆಸಲಾಗಿದೆ.
ಬುಧವಾರ ರಾತ್ರಿಯೇ ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಉಳಿದ ಆಭರಣಗಳು ಎಲ್ಲಿ ಎನ್ನುವ ಕುರಿತು ಪತ್ತೆ ಹಚ್ಚಬೇಕಿದೆ. ಘಟನೆಯಲ್ಲಿ ಸಾರ್ವಜನಿಕರು ಅಡಮಾನವಿರಿಸಿದ್ದ ಒಟ್ಟು 22 ಕೆ.ಜಿ. ಬಂಗಾರ ದರೋಡೆಯಾಗಿತ್ತು ಎಂದರು.
ಬೇಕರಿ ಇಟ್ಟುಕೊಂಡಿದ್ದ ಆರೋಪಿಗಳು: ಮೂಲತ: ತಮಿಳುನಾಡಿನವರಾದ ವಿಜಯ್ ಕುಮಾರ್, ಅಜಯ್ ಕುಮಾರ್ ಮತ್ತು ಪರಮಾನಂದ ನ್ಯಾಮತಿಯಲ್ಲಿಯೇ ಕಳೆದ ಅನೇಕ ವರ್ಷಗಳಿಂದ ಬೇಕರಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಉಳಿದ ಮೂವರ ಪೈಕಿ ಅಭಿಷೇಕ, ಚಂದ್ರು, ಹೊನ್ನಾಳಿಯವರು. ಮಂಜುನಾಥ ನ್ಯಾಮತಿ ನಿವಾಸಿಯಾಗಿದ್ದನು.
ಗ್ಯಾಸ್ ಕಟ್ಟರ್ ಬಳಕೆ: ಬ್ಯಾಂಕಿನ ಹಿಂದೆ ಕಾಡು ರೀತಿಯಲ್ಲಿ ಮರ ಗಿಡಗಳು ಬೆಳೆದಿರುವುದು ದರೋಡೆಗೆ ಅನುಕೂಲವಾಗಿದೆ. ದರೋಡೆಗಾಗಿ ಸುಮಾರು 4 ಕಿ.ಮೀ. ದೂರ ನಡೆದುಕೊಂಡೇ ಬಂದಿದ್ದ ಆರೋಪಿಗಳು ಬ್ಯಾಂಕಿನ ಮುಖ್ಯದ್ವಾರವನ್ನು ಒಡೆದು ಒಳನುಗ್ಗಿ, ಆಭರಣಗಳನ್ನು ಸಂಗ್ರಹಿಸಿ ಇಡಲಾಗಿದ್ದ ಬೀರುಗಳನ್ನು ಗ್ಯಾಸ್ ಕಟ್ಟರ್ ಬಳಸಿ ಕೋಟ್ಯಂತರ ರೂ. ಮೌಲ್ಯದ 22 ಕೆಜಿ ಆಭರಣಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು ಎಂದು ತಿಳಿಸಿದ್ದಾರೆ
ಸಾಕ್ಷಿ ನಾಶಕ್ಕೆ ಕಾರದ ಪುಡಿ ಬಳಕೆ; ಸುಳಿವು ಸಿಗಬಾರದು ಎಂದು ಬ್ಯಾಂಕಿನ ತುಂಬಾ ಖಾರದ ಪುಡಿ ಎರಚಿ ಸಾಕ್ಷಿಗಳನ್ನು ನಾಶಪಡಿಸುವ ಯತ್ನ ನಡೆದಿತ್ತು. ಇದೇ ಮೊದಲ ಬಾರಿಗೆ ಈ ದರೋಡೆ ಪ್ರಕರಣದಲ್ಲಿ ಆರೋಪಿಗಳು ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಆದರೆ, ಮಾ.15 ರ ಮಧ್ಯರಾತ್ರಿ ಹೊನ್ನಾಳಿ ತಾಲೂಕಿನ ಅರಭಘಟ್ಟ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ ವೇಳೆ ಗುಂಡು ಹಾರಿಸಿ ಸೆರೆ ಹಿಡಿದಿದ್ದ ಉತ್ತರ ಪ್ರದೇಶದ ದರೋಡೆಕೋರರ ಗುಂಪಿಗೂ, ಇವರಿಗೂ ನಂಟು ಇದೆಯಾ ಎನ್ನುವ ಕುರಿತು ವಿಚಾರಣೆ ಮುಂದುವರಿದಿದೆ ಎಂದು ಉಮಾ ಪ್ರಶಾಂತ್ ಮಾಹಿತಿ ನೀಡಿದರು.



