ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದ್ರೋಹವೆಸಗಿದ ಯಶೋಧ ಉಮೇಶ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಭರತ್ ಕಾಲೋನಿ ಮುಖಂಡರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಸಿ ನಟರಾಜ್, ನಿನ್ನೆಯ ಮೇಯರ್ ಚುನಾವಣೆಯಲ್ಲಿ ನಮ್ಮ ವಾರ್ಡ್ ಪ್ರತಿನಿಧಿಯಾಗಿ ಯಶೋಧಮ್ಮ ಉಮೇಶ್ ಮತದಾನ ಮಾಡಿಲ್ಲ. ಅವರ ಗೆಲುವಿಗೆ ನೂರಾರು ಕಾರ್ಯಕರ್ತರು ಕೆಲಸ ಮಾಡಿದ್ದೇವೆ. ಹಣದ ಆಮೀಷಕ್ಕೆ ಒಳಗಾಗಿ ಕ್ಷೇತ್ರದ ಮತದಾರಿಗೆ ದ್ರೋಹವೆಸಗಿದ್ದಾರೆ ಎಂದು ಆರೋಪಿಸಿದರು.
2600 ಮತಗಳ ಅಂತರದಿಂದ ಗೆಲ್ಲಿಸಿದ್ದೇವೆ. 30 ವರ್ಷದಿಂದ ದುಡಿದ ಕಾರ್ಯಕರ್ತರಿಗೆ ಟಿಕೆಟ್ ನೀಡದೆ, ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ನೀಡಲಾಗಿತ್ತು. ಆದರೂ ಸಹ ಪಕ್ಷಕ್ಕೆ ನಿಷ್ಠೆ ತೋರಿಸಲಿಲ್ಲ. ಪಕ್ಷಕ್ಕೆ ಮೋಸ ಮಾಡಿದ ಯಶೋಧಮ್ಮ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಅವರು ರಾಜೀನಾಮೆ ಕೊಡದಿದ್ದರೆ, ಉಗ್ರ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಜಿಲ್ಲಾ ವರಿಷ್ಠರು ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಶಿವಕುಮಾರ್, ರಂಗನಾಥ್, ಎಂ.ಶಂಕರ್ ಅಲೆಗ್ಸಾಂಡರ್ ಉಪಸ್ಥಿತರಿದ್ದರು.