ಡಿವಿಜಿ ಸುದ್ದಿ, ಬೆಂಗಳೂರು: ಸೋಮವಾರ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ನೂತನ ಸದಸ್ಯರಾಗಿ ಆಯ್ಕೆಯಾದ ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರು ಬೆಂಗಳೂರು ಆರ್.ಟಿ.ನಗರದಲ್ಲಿರುವ ತರಳಬಾಳು ಕೇಂದ್ರದಲ್ಲಿ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಗೃಹಸಚಿ ಬಸವರಾಜ ಬೊಮ್ಮಾಯಿ ಸಾಥ್ ನೀಡಿದರು.

ಶ್ರೀಗಳ ರೈತ ಮುಖಿ ಹಾಗೂ ಸಮಾಜಮುಖಿ ಕಾರ್ಯಗಳ ಸೇವೆಯನ್ನು ಭಕ್ತಿ ಶ್ರದ್ದೆಯಿಂದ ಸ್ಮರಿಸಿದ ಸವದಿಯವರು ಆಡಳಿತದಲ್ಲಿ ಸೂಕ್ತ ಮಾರ್ಗದರ್ಶನ ಮಾಡುವಂತೆ ಕೇಳಿಕೊಂಡರು, ಆಶೀರ್ವಾದ ನಂತರ ಮಾತನಾಡಿದ ತರಳಬಾಳು ಶ್ರೀಗಳು, ಕರ್ನಾಟಕದ ರೈತ ಬಂಧುಗಳ ಉನ್ನತಿಗೆ, ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುವ ನಿಟ್ಟಿನಲ್ಲಿ, ಉತ್ಪತ್ತಿಯಾದ ಬೆಳೆಗಳನ್ನು ಸೂಕ್ತವಾಗಿ ಸಂರಕ್ಷಣೆ ಮಾಡವ ಆಧುನಿಕ ವ್ಯವಸ್ಥೆ ಕಲ್ಪಿಸಿ, ಅಗತ್ಯವಿದ್ದಾಗ ಮಾರಾಟ ಮಾಡುವ ವ್ಯವಸ್ಥೆಯ ಅನುಕೂಲ ಮಾಡುವಂತಹ ವಿಶೇಷ ಯೋಜನೆಗಳನ್ನು ರೂಪಿಸಿದರೆ ರೈತರ ಬಾಳು ಬಂಗಾರವಾಗುತ್ತದೆ.
ರೈತರಿಗೆ ಮಾದರಿಯಾಗುವಂತಹ ವಿಶೇಷ ಯೋಜನೆಗಳನ್ನು ರೂಪಿಸಬೇಕು. ಜಾನುವಾರು ಸಂಕುಲದ ಸಂರಕ್ಷಣೆಗೆ ಹಾಗೂ ಏತನೀರಾವರಿಯಂತಹ ಕೆರೆತುಂಬಿಸುವ ನೀರು ವ್ಯರ್ಥವಾಗಿ ಹರಿಯದಂತೆ ಸಂರಕ್ಷಣೆ ಮತ್ತು ನಿರ್ವಹಣೆಯ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶ್ರೀಗಳು ಉಪಮುಖ್ಯಮಂತ್ರಿಗಳಿಗೆ ಸೂಚಿಸಿದರು.



