ದಾವಣಗೆರೆ: ನಡು ರಸ್ತೆಯಲ್ಲಿಯೇ ಸಿಮೆಂಟ್ ತುಂಬಿದ ಲಾರಿ ಧಗಧಗನೆ ಹೊತ್ತಿ ಉರಿದ ಘಟನೆ ಜಗಳೂರು ಬಳಿ ನಡೆದಿದೆ. ಆಂಧ್ರಪ್ರದೇಶದಿಂದ ದಾವಣಗೆರೆ ಕಡೆಗೆ ಬರುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಇಡೀ ಲಾರಿಗೆ ಆವರಿಸಿ ಸುಟ್ಟು ಭಸ್ಮವಾಗಿದೆ.
ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಸಮೀಪ ಘಟನೆ ನಡೆದಿದೆ. ರೈತರು ಒಕ್ಕಣೆ ಮಾಡಲು ರಸ್ತೆಯಲ್ಲಿ ಹರಡಿದ್ದ ಹುರಳಿ ಸೊಪ್ಪಿನ ಮೇಲೆ ಲಾರಿ ಬಂದಿದೆ. ಲಾರಿಯಿಂದ ಸಿಡಿದ ಬೆಂಕಿ ಕಿಡಿ ಒಣಗಿದ ಹುರಳಿ ಸೊಪ್ಪಿಗೆ ತಗುಲಿ ಬೆಂಕಿ ಹೊತ್ತಿ ಉರಿದಿದೆ. ದೋಣೆಹಳ್ಳಿ-ಮುಷ್ಟೂರು ನಡುವೆ ಈ ಘಟನೆ ನಡೆದಿದೆ. ನೋಡ ನೋಡುತ್ತಲೇ ಇಡೀ ಲಾರಿ ಸಂಪೂರ್ಣ ಭಸ್ಮವಾಗಿದೆ.
ಲಾರಿಗೆ ಸಣ್ಣದಾಗಿ ಬೆಂಕಿ ಹೊತ್ತಿಕಿಂಡ ತಕ್ಷಣ ಗಮನಿಸಿದ ಚಾಲಕ, ಕ್ಲೀನರ್ ಲಾರಿ ನಿಲುಗಡೆ ಮಾಡಿ ಕೆಳಗೆ ಇಳಿದಿದ್ದಾರೆ. ಕ್ಷಣಾರ್ಧದಲ್ಲಿ ಬೆಂಕಿ ಜೋರಾಗಿ ಹೊತ್ತಿ ಉರಿದು, ಇಡೀ ಲಾರಿ ಸುಟ್ಟು ಹೋಗಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.