ದಾವಣಗೆರೆ ಹಣ ವಿಚಾರವಾಗಿ ಮಹಿಳೆ ಜೊತೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಎಸ್‌ಪಿಎಸ್ ನಗರದಲ್ಲಿ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಮಹಿಳೆ ಮೇಲೆ ಹಲ್ಲೆ ಮಾಡಿ, ಪ್ರಜ್ಞೆ ಕಳೆದುಕೊಂಡಿದ್ದ ಆಕೆಯನ್ನು ನೇಣು ಹಾಕಿ ಕೊಲೆ ಮಾಡಿದ ಆರೋಪಿಯನ್ನು 24 ಗಂಟೆಯಲ್ಲೇ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಎಸ್ಪಿಎಸ್ ನಗರದ 8ನೇ ಕ್ರಾಸ್ ನಿವಾಸಿ ಮುಬೀನಾ ಬಾನು (35) ಮೃತ ಮಹಿಳೆ. ಮೃತಳ ಪರಿಚಯಸ್ಥ ಬಾಷಾ, ಆಟೋ ರಿಕ್ಷಾ ಚಾಲಕ ನೂರ್ ಅಹಮ್ಮದ್ ಅಲಿಯಾಸ್ ಶಾರು (25) ಎಂಬಾತ 14ರಂದು ರಾತ್ರಿ 11ರ ವೇಳೆ ಮುಬೀನಾ ಬಾನು ಬಳಿ ಮಾತನಾಡುತ್ತಿದ್ದ ವೇಳೆ ತಾನು ಕೊಟ್ಟಿದ್ದ ಹಣ ವಾಪಾಸ್ ಕೇಳಿದ ಆಕೆಯ ಜೊತೆಗೆ ಜಗಳ ಮಾಡಿ, ಹಲ್ಲೆ ಮಾಡಿದ್ದಾನೆ.
ಆರೋಪಿ ನೂರ್ ಅಹಮ್ಮದ್ ಅಲಿಯಾಸ್ ಶಾರು, ಮುಬೀನಾಬಾನುಳನ್ನು ಕೋಣೆಗೆ ಎಳೆದೊಯ್ದು ಹಲ್ಲೆ ನಡೆಸಿದ್ದಾನೆ, ಆಕೆ ಪ್ರಜ್ಞೆ ತಪ್ಪಿ ಮೃತಪಟ್ಟಿದ್ದಾಳೆ. ಬಳಿಕ ಮನೆಯ ಮೇಲ್ಚಾವಣಿಯ ಕಬ್ಬಿಣದ ಹುಕ್ಕಿಗೆ ನೇಣು ಹಾಕಿದ್ದಾನೆ. ಈ ಬಗ್ಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್ಪಿ ಉಮಾ ಪ್ರಶಾಂತ, ಎಎಸ್ಪಿ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಡಿವೈಎಸ್ಪಿ ಮಲ್ಲೇಶ ದೊಡ್ಮನಿ ಮಾರ್ಗದರ್ಶನದಲ್ಲಿ ಆಜಾದ್ ನಗರ ವೃತ್ತ ನಿರೀಕ್ಷಕ ಎಸ್.ಬಾಲಚಂದ್ರ ನಾಯ್ಕ, ಎಸ್‌ಐ ಲಲಿತಮ್ಮ, ಎಎಸ್ಐ ಮಹಮ್ಮದ್ ಖಾನ್, ಸಿಬ್ಬಂದಿ ಮಂಜುನಾಥ, ಶಶಿಕುಮಾರ, ಶಫೀವುಲ್ಲಾ ಸಿದ್ದಿಕ್ ಅಲಿ, ಮಹೇಶ, ಅರುಣಕುಮಾರ, ಸುರೇಶ, ಯೋಗೇಶ, ಸಿದ್ದೇಶ, ಎಸ್ಪಿ ಕಚೇರಿಯ ರಾಘವೇಂದ್ರ, ನಾಗರಾಜರನ್ನು ಒಳಗೊಂಡ ತಂಡವು ಆರೋಪಿ ನೂರ್ ಅಹಮ್ಮದ್ ಅಲಿಯಾಸ್ ಶಾರುವನ್ನು ಬುಧವಾರ ಬಂಧಿಸಿ, ತನಿಖೆಗೆ ಒಳಪಡಿಸಿದಾಗ ಕೊಲೆ ವಿಚಾರ ಬಾಯಿಬಿಟ್ಟಿದ್ದಾನೆ. ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.



