ದಾವಣಗೆರೆ: ಜಿಲ್ಲೆಯ ಯಾವೊಬ್ಬ ಅಧಿಕಾರಿಯೂ ಶಾಸಕರಿಗೆ ಸ್ಪಂದಿಸುತ್ತಿಲ್ಲ. ಶಿಷ್ಟಾಚಾರ ಪಾಲಿಸಲಾಗುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರ ಮಾತು, ಅಭಿಪ್ರಾಯಗಳಿಗೆ ಗೌರವ ಸಿಗುತ್ತಿಲ್ಲ. ರೈತರು, ಜನರಿಗೆ ನ್ಯಾಯ ಕೊಡಿಸಬೇಕೆಂದು ನನ್ನನ್ನು ಆಯ್ಕೆ ಮಾಡಿದ್ದಾರೆ. ರೈತರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗದಿದ್ದರೆ ಈ ಸ್ಥಾನದಲ್ಲಿ ಇರಬೇಕಾ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಅಸಮಾಧಾನ ಹೊರ ಹಾಕಿದರು.
ಇತ್ತೀಚೆಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ನೀಡಿರುವ ಜಿಲ್ಲಾ ಉಸ್ತುವಾರಿ ಸ್ಥಾನ ಬದಲಾಯಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಶಾಸಕ ಶಿವಗಂಗಾ ಬಸವರಾಜು ಪತ್ರ ಬರೆದ ಅಸಮಾಧಾನ ಹೊರಹಾಕಿದ್ದರು. ಇದೀಗ ಮತ್ತೊಮ್ಮೆ ತಮ್ಮದೇ ಸರ್ಕಾರದ ವಿರುದ್ಧ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಎದುರು ನಲ್ಲೂರು ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ನಕಲಿ ಮತದಾರರ ಪಟ್ಟಿ ಅಂಗೀಕರಿಸಲಾಗಿದೆ ಎಂದು ಆರೋಪಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮತದಾರರ ಪಟ್ಟಿ ಸಮರ್ಪಕವಾಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ. ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿಲ್ಲ ಎಂದರು.
ಕ್ಷೇತ್ರದ ಜನರಿಗೆ ನ್ಯಾಯ ದೊರಕಿಸಿಕೊಡಲು ಧರಣಿಯೊಂದೇ ಮಾರ್ಗ. ಜಿಲ್ಲಾ ಮಟ್ಟದ ಅಧಿಕಾರಿಗಳ ವರ್ಗಾವಣೆಯಲ್ಲಿ ಶಾಸಕರ ಅಭಿಪ್ರಾಯಗಳಿಗೆ ಮನ್ನಣೆ ಸಿಗುತ್ತಿಲ್ಲ. ಯಾವುದೇ ಅಧಿಕಾರಿ ನಮಗೆ ಗೌರವ ನೀಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಗಮನ ಹರಿಸಬೇಕು ಎಂದರು.
ಈ ಕೃಷಿ ಸಹಕಾರ ಸಂಘದಲ್ಲಿನ ಅವ್ಯವಹಾರ, ಮತದಾರರ ಪಟ್ಟಿಯಲ್ಲಿನ ಲೋಪ ಬಗ್ಗೆ ಗಮನಕ್ಕೆ ತಂದಿದ್ದರೂ ಕ್ರಮ ಕೈಗೊಳ್ಳದಿದ್ದರೆ ಏನು ಮಾಡಬೇಕು? ಹಾಗಾಗಿ, ರೈತರೊಟ್ಟಿಗೆ ಪ್ರತಿಭಟನೆಗೆ ಬಂದಿದ್ದೇನೆ. ನಲ್ಲೂರು ಕೃಷಿ ಪತ್ತಿನ ಸಹಕಾರ ಸಂಘ ಸೂಪರ್ ಸೀಡ್ ಆಗಲೇಬೇಕು. ಅಲ್ಲಿಯವರೆಗೆ ಹೋರಾಟ ಮುಂದುವರೆಯುತ್ತದೆ ಎಂದರು.



