Connect with us

Dvgsuddi Kannada | online news portal | Kannada news online

ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬದಲಾವಣೆಗೆ ಪಟ್ಟು ಹಿಡಿದ ಚನ್ನಗಿರಿ ಶಾಸಕ; ಕಾರಣ ಏನು..?

ದಾವಣಗೆರೆ

ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬದಲಾವಣೆಗೆ ಪಟ್ಟು ಹಿಡಿದ ಚನ್ನಗಿರಿ ಶಾಸಕ; ಕಾರಣ ಏನು..?

ದಾವಣಗೆರೆ: ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್​ಎಸ್ ಮಲ್ಲಿಕಾರ್ಜುನ್ ಬದಲಾವಣೆಗೆ ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ಪಟ್ಟು ಹಿಡಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​​ ಅವರಿಗೆ ಮನವಿ ಮಾಡಿ ಪತ್ರ ಬರೆದಿದ್ದಾರೆ.

ಚನ್ನಗಿರಿ ಶಾಸಕ ಇತ್ತೀಚೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಸಿಎಂ ಮಾಡಬೇಕು ಎಂದು ಹೇಳಿಕೆ ನೀಡಿ ಪಕ್ಷದಲ್ಲಿ ಒಂದಿಷ್ಟು ಗೊಂದಲ ಉಂಟು ಮಾಡಿದ್ದರು. ಇದೀಗ ಮತ್ತೊಮ್ಮೆ ತಮ್ಮ‌ ಜಿಲ್ಲೆಯವರೇ ಆದ ಸಚಿವ ಎಸ್​ಎಸ್ ಮಲ್ಲಿಕಾರ್ಜುನ್ ಬದಲಾವಣೆಗೆ ಪತ್ರ ಬರೆದು ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಮೂಡಿಸಿದ್ದಾರೆ.

ಶಿವಮೊಗ್ಗ PWD ಅಧಿಕಾರಿ ವಿಜಯಕುಮಾರ್ ವರ್ಗಾವಣೆಗೆ ಸಿಎಂ ಸಿದ್ದರಾಮಯ್ಯ ಒಪ್ಪಿದ್ದರು. ಅವರು ದಾವಣಗೆರೆಗೆ ವರ್ಗಾವಣೆ ಆಗಬೇಕಿತ್ತು. ಆದರೆ ಉದ್ದೇಶಪೂರ್ವಕವಾಗಿ ದಾವಣಗೆರೆ ಅಧಿಕಾರಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿಲ್ಲ. ಓಡೆನಪುರರನ್ನು ಉದ್ದೇಶಪೂರ್ವಕವಾಗಿ ಹುದ್ದೆಯಿಂದ ಬಿಡುಗಡೆಗೊಳಿಸಿಲ್ಲ. ಸರ್ಕಾರಿ ನೌಕರರ ಚುನಾವಣೆಯಲ್ಲಿ ಓಡೆನಪುರ ಗೆದ್ದು ಅಧ್ಯಕ್ಷರಾಗಿದ್ದಾರೆ. ಇವರು ಬಿಜೆಪಿ ಬೆಂಬಲಿತರು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೋತಿದ್ದಾರೆ. ಇದು ಬಿಜೆಪಿಯವರು ಹಾಗೂ ಮಲ್ಲಿಕಾರ್ಜುನ್​ ಅವರ ಹೊಂದಾಣಿಕೆ ರಾಜಕೀಯ. ಇದರಿಂದಾಗಿ ಕೂಡಲೇ ದಾವಣಗೆರೆ ಉಸ್ತುವಾರಿ ಸಚಿವರ ಬದಲಾವಣೆ ಮಾಡಿ ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆಲುವಿಗೆ ಕಾರಣರಾದ ಆರೋಪ;
ಈ ಹಿಂದೆ ನಡೆದ ದಾವಣಗೆರೆ ಜಿಲ್ಲಾ ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಚನ್ನಗಿರಿ ತಾಲ್ಲೂಕಿನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯನ್ನು ಬೆಂಬಲಿಸದೆ ಬಿಜೆಪಿ ಬೆಂಬಲಿತ, ಮಾಜಿ ಶಾಸಕರ ಬೆಂಬಲಿಗನ ಗೆಲುವಿಗೆ ಪರೋಕ್ಷವಾಗಿ ಕಾರಣರಾಗಿರುತ್ತಾರೆ. ಹೊನ್ನಾಳಿ ಶಾಸಕರ ಪುತ್ರರಾದ ಸುರೇಂದ್ರರವರು ಈ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜಯಿಯಾಗಿದ್ದು ರಾಜ್ಯ ಅಪೆಕ್ಸ್‌ ಬ್ಯಾಂಕಿಗೆ ಜಿಲ್ಲೆಯಿಂದ ರಾಜ್ಯ ಅಪೆಕ್ಸ್ ಬ್ಯಾಂಕಿಗೆ ನಿರ್ದೇಶಕರಾಗಿ ನಾಮನಿರ್ದೇಶಿಸಲು ಸಹಕರಿಸುವಂತೆ ಕೋರಿದ್ದರೂ ಬೆಂಬಲಿಸದೆ, ಬಿಜೆಪಿ ಬೆಂಬಲಿಗರನ್ನು ರಾಜ್ಯ ಅಪೆಕ್ಸ್ ಬ್ಯಾಂಕಿನಲ್ಲಿ ನಿರ್ದೇಶಕರನ್ನಾಗಿ ಮುಂದುವರೆಸಿದ್ದು ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯು ಕಾಂಗ್ರೆಸ್ ಆಡಳಿತದ ಹಿಡಿತದಲ್ಲಿದ್ದರೂ ಸಹ ಮುಜುಗರ ಅನುಭವಿಸುವಂತಾಗಿದೆ ಎಂದು ಉಸ್ತುವಾರಿ ಸಚಿವರ ವಿರುದ್ಧ ಪತ್ರದಲ್ಲಿ ಆರೋಪಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರ ದ್ವಿಮುಖ ನೀತಿ, ಸ್ಥಳೀಯ ಶಾಸಕರೊಂದಿಗೆ ಯಾವುದೇ ಗೌರವ ಮತ್ತು ವಿಶ್ವಾಸ ಇಲ್ಲದಿರುವುದು ಆಡಳಿತಾತ್ಮಕ ಮತ್ತು ಅಭಿವೃದ್ಧಿ ವಿಚಾರಗಳಲ್ಲಿ ಏಕಪಕ್ಷೀಯವಾಗಿ ನಡವಳಿಕೆಯಿಂದ ನೊಂದಿರುತ್ತೇವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಬೆಜೆಪಿ 25 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಹಿನ್ನಡೆಯಾಗಿರುತ್ತದೆ. ನಮ್ಮ ಚನ್ನಗಿರಿ ಕ್ಷೇತ್ರದಲ್ಲಿ 10 ಸಾವಿರ ಬಹುಮತ ನೀಡಿ ಗೆಲುವಿಗೆ ಕಾರಣವಾಗಿದ್ದು ಪಕ್ಷ ಸಂಘಟನೆ, ಕಾರ್ಯಕರ್ತರೊಂದಿಗಿನ ವಿಶ್ವಾಸದ ಪ್ರತಿಫಲವೆಂದೇ ಭಾವಿಸಿದ್ದೇನೆ ಎಂದು ಬಸವರಾಜ್ ಶಿವಗಂಗಾ ಆರೋಪಿಸಿದ್ದಾರೆ.

ಮುಂದಿನ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಗಳ ಚುನಾವಣೆಯಲ್ಲಿ ಈಗಾಗಲೇ ಹೊಂದಾಣಿಕೆಯ ಲಕ್ಷಣಗಳು ಗೋಚರಿಸುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುವ ಸಂಭವ ಇರುವುದರಿಂದ ನಮ್ಮ ನೋವು, ಅವಮಾನ, ಮುಜುಗರವನ್ನು ತಪ್ಪಿಸುವುದರ ಜೊತೆ ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ, ಮುಖಂಡರ, ಕಾರಕರ್ತರ ಹಿತದೃಷ್ಟಿಯಿಂದ ಪ್ರಸ್ತುತ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸುವಂತೆ ಈ ಮೂಲಕ ತಮ್ಮಲ್ಲಿ ಗೌರವಪೂರ್ವಕವಾಗಿ ಕೋರಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top