ಬೆಂಗಳೂರು,: ಫೆಂಗಲ್ ಚಂಡಮಾರುತ ಪರಿಣಾಮ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ,ಮಳೆ ಸುರಿಯುತ್ತಿದೆ. ಶೀತ ವಾತಾವರಣವಿದ್ದು, ಕೋಲಾರ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ಒಂದು ದಿನ ರಜೆ ಘೋಷಣೆ ಮಾಡಲಾಗಿದೆ.
ತುಂತುರು ಮಳೆ ಮತ್ತು ವಿಪರೀತ ಚಳಿ ಹಿನ್ನೆಲೆ ಕೋಲಾರ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ಒಂದು ದಿನ ರಜೆ ಘೋಷಿಸಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ಆದೇಶ ಹೊರಡಿಸಿದ್ದಾರೆ. ನಾಳಿನ ರಜೆಯನ್ನು ಮತ್ತೊಂದು ರಜಾ ದಿನದಲ್ಲಿ ತರಗತಿ ನಡೆಸಿ ಸರಿದೂಗಿಸುವಂತೆ ಡಿಸಿ ಅಕ್ರಂ ಪಾಷಾ ಸೂಚನೆ ನೀಡಿದ್ದಾರೆ.
ಫೆಂಗಲ್ ಸೈಕ್ಲೋನ್ ನಿಂದ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದೆ. ಬೆಳಿಗ್ಗೆಯಿಂದ ಜಿಟಿ ಜಿಟಿ ಮಳೆಯಿಂದಾಗಿ ವಾತಾವರಣ ತಂಪಾಗಿದೆ. ಕೋಲಾರದಲ್ಲಿ ಮೋಡ ಕವಿದ ವಾತಾವರಣ ಮತ್ತು ಶೀತಗಾಳಿ ಇದ್ದು, ಜಿಟಿ ಜಿಟಿ ಮಳೆಯಿಂದ ದಿನನಿತ್ಯದ ಕೆಲಸಗಳಿಗೆ ಮತ್ತು ರಾಗಿ ಬೆಳೆಗೆ ತೊಂದರೆ ಉಂಟಾಗಿದ್ದು, ರಾಗಿ ತೆನೆ ಮೊಳಕೆ ಹೊಡೆಯುವ ಆತಂಕ ಉಂಟಾಗಿದೆ.



