ದಾವಣಗೆರೆ: ಅಕ್ರಮವಾಗಿ ಸಾಗಿಸುತ್ತಿದ್ದ 1 ಲಕ್ಷ ಮೌಲ್ಯದ ಶ್ರೀಗಂಧದ ತುಂಡುಗಳನ್ನು ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊನ್ನೇಬಾಗಿ-ರಾಜಗೊಂಡನಹಳ್ಳಿ ಗ್ರಾಮ ಬಳಿ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಅರಣ್ಯ ಇಲಾಖೆ ಪೊಲೀಸರು ಬಂಧಿಸಿದ್ದಾರೆ.
ಚನ್ನಗಿರಿ ಅಹಮದ್ ಶರೀಫ್ (51) ಬಂಧಿತ ಆರೋಪಿ. ಚನ್ನಗಿರಿ ವಲಯ ಅರಣ್ಯಾಧಿಕಾರಿ ಎಸ್. ಶ್ವೇತಾ ಮಾರ್ಗದರ್ಶನದಲ್ಲಿ ಗಸ್ತು ಅರಣ್ಯ ಸಿಬ್ಬಂದಿ ದಾಳಿ ನಡರದಿದೆ. 1 ಲಕ್ಷ ಮೌಲ್ಯದ 11 ಕೆ.ಜಿ. ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಹಮದ್ ಶರೀಫ್ ಬುಕ್ಕಾಂಬುದಿಯ ಜಗದೀಶ್ ನಾಯ್ಕ ಎಂಬಾತನಿಂದ ತುಂಡುಗಳನ್ನು ಪಡೆದು, ಸ್ಕೂಟಿಯಲ್ಲಿ ಇಟ್ಟುಕೊಂಡು ಚನ್ನಗಿರಿ ಪಟ್ಟಣದ ಕಡೆಗೆ ಬರುತ್ತಿದ್ದ ಸಮಯದಲ್ಲಿ ದಾಳಿ ನಡೆಸಲಾಗಿದೆ.
ಆರೋಪಿ ಜತೆಗಿದ್ದ ಇನ್ನೊಬ್ಬ ಪರಾರಿಯಾಗಿದ್ದಾನೆ. ಜಗದೀಶ್ ನಾಯ್ಕ ಹಾಗೂ ಗಫರ್ ಸಾಬ್ ಬಂಧನಕ್ಕೆ ಬಲೆ ಬೀಸಲಾಗಿದೆ. ಆರೋಪಿ ಅಹಮದ್ ಶರೀಫ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಎಂ.ಎಂ. ಜಗದೀಶ್, ಎಚ್.ಜಿ. ಹಾಲಸ್ವಾಮಿ, ಗಸ್ತು ಪಾಲಕರಾದ ವಸಂತ್ ಕುಮಾರ್, ದೀಪಕ್, ಬಸವನಗೌಡ, ಬಸವರಾಜ ಕರೋಣೆ ಹಾಗೂ ಚಾಲಕ ದೇವರಾಜ್ ಭಾಗಿಯಾಗಿದ್ದರು.



