Connect with us

Dvgsuddi Kannada | online news portal | Kannada news online

ರಾಜ್ಯೋತ್ಸವ ಅಂಕಣ- ಹಂಪಿಯಲ್ಲಿತ್ತು ಕರ್ನಾಟಕ ಸಾಮ್ರಾಜ್ಯ!- ತರಳಬಾಳು ಶ್ರೀ

ಅಂಕಣ

ರಾಜ್ಯೋತ್ಸವ ಅಂಕಣ- ಹಂಪಿಯಲ್ಲಿತ್ತು ಕರ್ನಾಟಕ ಸಾಮ್ರಾಜ್ಯ!- ತರಳಬಾಳು ಶ್ರೀ

ರಾಜ್ಯೋತ್ಸವ ಕಾರಣ ಎಲ್ಲೆಡೆ ಕನ್ನಡ ಬಾವುಟಗಳ ಹಾರಾಟ! ಭುವನೇಶ್ವರಿಯ ತೇರನೆಳೆಯಲು ನಾ ಮುಂದು ತಾ ಮುಂದು ಎಂಬ ಉತ್ಸಾಹ ಮತ್ತು ಆತುರ! ಕೆಲವರಿಗೆ ಅದಕ್ಕಿಂತ ಹೆಚ್ಚಿನ ಆತುರ ರಾಜ್ಯೋತ್ಸವ ಪ್ರಶಸ್ತಿ ಪಡೆಯಬೇಕೆಂಬ ಹಂಬಲ! ಪ್ರಶಸ್ತಿಗಳಿಗಾಗಿ ಅರ್ಜಿ ಗುಜರಾಯಿಸಿ ಪ್ರಭಾವಿ ವ್ಯಕ್ತಿಗಳಿಂದ ಶಿಫಾರಸು ಮಾಡಿಸುವುದು ಪ್ರಶಸ್ತಿಗಳಿಗೇ ಮಾಡುವ ಅವಮಾನ! ಸೇವೆಯಲ್ಲಿ ತೊಡಗಿದವರಿಗೆ ಪ್ರಶಸ್ತಿ ಪುರಸ್ಕಾರಗಳು ನೆರಳಿದ್ದಂತೆ. ಮುಂದೆ ಮುಂದೆ ನಡೆದಂತೆ ನೆರಳು ತಾನಾಗಿಯೇ ಹಿಂಬಾಲಿಸುತ್ತದೆ. ನಡೆಯುವಾಗ ಮುಂದೆ ಬೆಳಕಿದ್ದರೆ ಮಾತ್ರ ಹಿಂಬದಿಯಲ್ಲಿ ನೆರಳು ಬೀಳುತ್ತದೆ. ಇಲ್ಲದಿದ್ದರೆ ಇಲ್ಲ. ಬಿಸಿಲಿನಲ್ಲಿ ನಡೆಯುವವರಿಗೆ ನೆತ್ತಿಯ ಮೇಲೆ ನೆರಳು ಬೇಕೇ ಹೊರತು ಬೆನ್ನ ಹಿಂದಿನ ನೆರಳಿನಿಂದ ಪ್ರಯೋಜನವಿಲ್ಲ. ಹಾಗೆಯೇ ಇಂದಿನ “ಶಿಫಾರಸು ಯುಗ” ದಲ್ಲಿ (Recommendation Era) ಪ್ರಖರವಾದ ರಾಜಕೀಯ ವರ್ಚಸ್ಸು ಇರುವ ಪ್ರಭಾವಿ ವ್ಯಕ್ತಿಗಳ ಛತ್ರಛಾಯೆ ಇಲ್ಲದಿದ್ದರೆ ತಮ್ಮ ನೆತ್ತಿಯ ಮೇಲೆ ಪ್ರಶಸ್ತಿಗಳ ಗರಿ ಮೂಡುವುದಿಲ್ಲ.

ನವಂಬರ್ ತಿಂಗಳು ಬಂತೆಂದರೆ ರಾಜ್ಯೋತ್ಸವಕ್ಕಿಂತ ರಾಜ್ಯೋತ್ಸವ ಪ್ರಶಸ್ತಿಗೆ ಹಾತೊರೆಯುವುದು ಜಾಸ್ತಿ. ಅದಕ್ಕಾಗಿ ರಾಜಕೀಯ ನೇತಾರರ ಹಿಂದೆ ದುಂಬಾಲು. ಸಿಕ್ಕಿದವರಿಗೆ ಎಲ್ಲಿಲ್ಲದ ಸಂತೋಷ, ಸಂಭ್ರಮ! ಸಿಗದವರಿಗೆ ಹತಾಶೆ, ಸಂಕಟ! “ಪ್ರಶಸ್ತಿ ವಿಜೇತ”ರೇ ಬೇರೆ; “ಪ್ರಶಸ್ತಿ ಭಾಜನ” ರೇ ಬೇರೆ. ಚುನಾವಣೆ/ಕ್ರೀಡಾ ಸ್ಪರ್ಧೆಗಳಲ್ಲಿ ಗೆದ್ದವರನ್ನು “ವಿಜೇತ”ರು ಎನ್ನುವಂತೆ “ಪ್ರಶಸ್ತಿ ವಿಜೇತ”ರು ಎಂದರೆ ಸ್ಪರ್ಧಾಳುಗಳು ಎಂಬ ಅಪಾರ್ಥ ಧ್ವನಿಸುತ್ತದೆ. ಪ್ರಶಸ್ತಿಗೆ ಅರ್ಹರು ಪ್ರಶಸ್ತಿಗಳಿಗಾಗಿ ಹಾತೊರೆಯುವುದಿಲ್ಲ ಸಿಗಲಿಲ್ಲವೆಂದು ಪರಿತಪಿಸುವುದೂ ಇಲ್ಲ, ಅವರ ಸಾಧನೆ ಪ್ರಶಸ್ತಿಗಾಗಿ ಅಲ್ಲ, ಆತ್ಮತೃಪ್ತಿಗಾಗಿ!

ರಾಜ್ಯೋತ್ಸವದ ಈ ಸಂದರ್ಭದಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಭಾವಾವೇಶದಿಂದ ಉದ್ದುದ್ದ ಭಾಷಣ ಬಿಗಿಯುವ ಕನ್ನಡದ ಉ(ಹು)ಟ್ಟು ಓ(ಹೋ)ರಾಟಗಾರರು ನೆನಪಿಡಬೇಕಾದ ಒಂದು ಮಹತ್ವದ ಐತಿಹಾಸಿಕ ಸಂಗತಿ ಇದೆ. ಅದೇನೆಂದರೆ ಕನ್ನಡ ನಾಡು ಕರ್ನಾಟಕವಾಗಿದ್ದು 1973ರಲ್ಲಿ ಅಲ್ಲ, ಅದು ಅಸ್ತಿತ್ವಕ್ಕೆ ಬಂದದ್ದು 1336ರಲ್ಲಿ. ಆಗ ಸಂಗಮ ವಂಶದ ಹಕ್ಕ-ಬುಕ್ಕರಿಂದ ಸ್ಥಾಪನೆಯಾಗಿದ್ದು ಕರ್ನಾಟಕ ಸಾಮ್ರಾಜ್ಯ! “ಮಹಾರಾಜಾಧಿರಾಜ, ಕನ್ನಡ ರಾಜ್ಯ ರಮಾರಮಣ, ದಕ್ಷಿಣ ಸಮುದ್ರಾಧೀಶ್ವರ, ಮೂರು ರಾಯರ ಗಂಡ” ಇತ್ಯಾದಿ ಬಿರುದಾಂಕಿತನಾದ ಚಕ್ರವರ್ತಿ ಕೃಷ್ಣದೇವರಾಯ ಆಳ್ವಿಕೆ ನಡೆಸಿದ್ದು ವಿಜಯನಗರ ಸಾಮ್ರಾಜ್ಯವನ್ನಲ್ಲ ಕರ್ನಾಟಕ ಸಾಮ್ರಾಜ್ಯವನ್ನು. ವಿಶ್ವಮಾನ್ಯತೆ ಪಡೆದ, ವಿಶ್ವಾದ್ಯಂತ ಪ್ರವಾಸಿಗರ ಆಕರ್ಷಣೆಯ ತಾಣವಾದ ಈಗಿನ “ಹಾಳು ಹಂಪಿ”ಯಲ್ಲಿದ್ದುದು ವಿಜಯನಗರ ಸಾಮಾಜ್ಯವಲ್ಲ ಕರ್ನಾಟಕ ಸಾಮಾಜ್ಯ. ವಿಜಯನಗರ ಅದರ ರಾಜಧಾನಿಯೇ ಹೊರತು ಅದು ಸಾಮ್ರಾಜ್ಯದ ಹೆಸರಲ್ಲ, ಪ್ರಖ್ಯಾತ ಇತಿಹಾಸಜ್ಞರಾದ ಡಾ. ರಿತ್ತಿ ಅವರು 30ಕ್ಕೂ ಹೆಚ್ಚು ಶಾಸನಗಳಲ್ಲಿ “ಕರ್ನಾಟಕ ಸಾಮ್ರಾಜ್ಯ” ಎಂದು ಉಲ್ಲೇಖವಿರುವುದನ್ನು ಗುರುತಿಸಿದ್ದಾರೆ. ಇದಕ್ಕೆ ಪೂರಕವಾಗಿ “ಕರ್ಣಾಟ, ಕರ್ಣಾಟ ದೇಶ” ಎಂದು ಉಲ್ಲೇಖವಿರುವ ಇನ್ನೂ ಅನೇಕ ಶಾಸನಗಳನ್ನು ಇತ್ತೀಚೆಗೆ ನಮ್ಮ ಗಮನಕ್ಕೆ ತಂದವರು ಈ ಸ್ಥಳವನ್ನು ಆಳವಾಗಿ ಸಂಶೋಧನೆ ನಡೆಸಿದ ಇತಿಹಾಸಜ್ಞೆ ಡಾ. ವಸುಂಧರಾ ಫಿಲಿಯೋಜಾ, ಪ್ಯಾರಿಸ್ ನಲ್ಲಿಯೇ ಮದುವೆಯಾಗಿ ಅಲ್ಲಿಯೇ ನೆಲೆಸಿದ್ದಾರೆ. ಅವರ ಪತಿ ಪ್ರೊಫೆಸರ್ ಪಿಯರ್ ಫಿಲಿಯೋಜಾ ಇತ್ತೀಚೆಗೆ ತಮ್ಮ ಮಕ್ಕಳು ಮೊಮ್ಮಕ್ಕಳೊಂದಿಗೆ ನಮ್ಮ ಮಠಕ್ಕೆ ಬಂದಿದ್ದರು.

ಪ್ರಖ್ಯಾತ ಸಂಸ್ಕೃತ ವಿದ್ವಾಂಸರಾದ ಅವರು ಕಳೆದ 50 ವರ್ಷಗಳಿಂದ ಭಾರತಕ್ಕೆ ಬಂದಾಗಲೆಲ್ಲಾ ತಪ್ಪದೆ ಸಿರಿಗೆರೆ ಮಾರ್ಗವಾಗಿ ಹಂಪಿಗೆ ಹೋಗುತ್ತಾ ಬಂದಿರುವುದು ಪ್ರವಾಸಿಗರಾಗಿ ಅಲ್ಲ. ಸಂಶೋಧಕರಾಗಿ, ಆದರ ಫಲವೇ ನಮಗೆ ಕೊಟ್ಟ ಅವರ ಇತ್ತೀಚಿನ ಪುಸ್ತಕ: “Hampi (Sacred India, Glorious India)”. ಇಟಲಿಯಲ್ಲಿ ಅಂದವಾಗಿ ಮುದ್ರಿತವಾದ ಈ ಪುಸ್ತಕ ಭಾರತ ಜನನಿಯ ತನುಜಾತೆಯಾದ ಕರ್ನಾಟಕದ ಭವ್ಯಪರಂಪರೆ ಮತ್ತು ಇತಿಹಾಸ ನಿರೂಪಿಸುವುದಲ್ಲದೆ ಶಿಲ್ಪಕಲಾಸೌಂದರ್ಯವುಳ್ಳ ವರ್ಣರಂಜಿತ ಚಿತ್ರಗಳೊಂದಿಗೆ ಓದುಗರ ಕಣ್ಣನ್ನು ತಣಿಸುತ್ತದೆ.

1977ರಲ್ಲಿ ವಿಯೆನ್ನಾ ವಿವಿಯಲ್ಲಿ ಉನ್ನತ ವ್ಯಾಸಂಗವನ್ನು ನಾವು ಮಾಡುತ್ತಿದ್ದಾಗ ಅದೇ ವರ್ಷ ಪ್ಯಾರಿಸ್ ನಲ್ಲಿ 3ನೇ ವಿಶ್ವ ಸಂಸ್ಕೃತ ಸಮ್ಮೇಳನವಿತ್ತು. ಅದರಲ್ಲಿ ಭಾಗವಹಿಸಿ ನಮ್ಮ ಸಂಶೋಧನಾ ಪ್ರಬಂಧ ಮಂಡಿಸಿದಾಗ ಅನೇಕ ಪಾಶ್ಚಾತ್ಯ ಸಂಸ್ಕೃತ ವಿದ್ವಾಂಸರ ಪರಿಚಯವಾಯಿತು ಸಮ್ಮೇಳನದ ಕಾರ್ಯದರ್ಶಿಗಳಾಗಿದ್ದ ಡಾ.ಜಾನ್ ಫಿಲಿಯೋಜಾ ನಾವು ಕರ್ನಾಟಕದವರೆಂದು ತಿಳಿದಾಗ “Ah! My daughter-in-law also is from Karnataka” ಎಂದು ಉದ್ಗರಿಸಿ ಅವರ ಸೊಸೆಯಾದ ವಸುಂಧರಾ ಮತ್ತು ಮಗನಾದ ಡಾ|| ಪಿಯರ್ ಫಿಲಿಯೋಜಾ ಅವರನ್ನು ಪರಿಚಯ ಮಾಡಿಕೊಟ್ಟರು. ಪ್ರೊಫೆಸರ್ ಪಿಯರ್ ಫಿಲಿಯೋಜಾರವರೂ ತಂದೆಯಂತೆಯೇ ಸಂಸ್ಕೃತದಲ್ಲಿ ಉದ್ದಾಮ ಪಂಡಿತರು. ಸರಳ ಸಜ್ಜನಿಕೆಯ ಸಾಕಾರಮೂರ್ತಿ. ಪಾಣಿನಿಯ ಸೂತ್ರಗಳ ಮೇಲೆ ಪತಂಜಲಿ ಮಹರ್ಷಿಯು ಬರೆದ ವ್ಯಾಕರಣ ಮಹಾಭಾಷ್ಯವನ್ನು ಸಂಪೂರ್ಣವಾಗಿ ಫ್ರೆಂಚ್ ಭಾಷೆಗೆ ಅನುವಾದ ಮಾಡಿರುತ್ತಾರೆ. ನಾವು ಪಾಣಿನಿಯ ಸೂತ್ರ ಆಧರಿಸಿ “ಗಣಕಾಷ್ಟಾಧ್ಯಾಯಿ” ಎಂಬ ತಂತ್ರಾಂಶ (Software) ಸಿದ್ಧಪಡಿಸುವಲ್ಲಿ ಅನೇಕ ಸಲಹೆ ಸೂಚನೆಗಳನ್ನು ನೀಡಿರುತ್ತಾರೆ.

ಪ್ಯಾರಿಸ್ ಗೆ ಹೋದಾಗಲೆಲ್ಲಾ ಅವರ ಮನೆಯಲ್ಲಿ ರುಚಿರುಚಿಯಾದ ಒಬ್ಬಟ್ಟನ್ನು ಸವಿಯುವುದರ ಜೊತೆಗೆ ಸಂಶೋಧನೆಯ ಒಬ್ಬಟ್ಟನ್ನು ಸವಿಯದ ದಿನಗಳಿಲ್ಲ. ಅವರ ಮನೆಯ ಬಾಗಿಲ ಮುಂದೆ ನಿಂತರೆ “ಕರ್ನಾಟಕ” ದರ್ಶನವಾಗುತ್ತದೆ. ವಸುಂಧರಾ ಫಿಲಿಯೋಜಾ ತಮ್ಮ ಮನೆಯ ಬಾಗಿಲ ಮೇಲೆ ಕನ್ನಡದಲ್ಲಿ “ಕರ್ನಾಟಕ” ಎಂದು ದಪ್ಪಕ್ಷರಗಳ ಫಲಕ ಹಾಕಿದ್ದಾರೆ! ಅವರ ಮನೆ ಮನೆಯಲ್ಲ; ಅದೊಂದು ಶ್ರೇಷ್ಠ ಗ್ರಂಥಾಲಯ!

ಭಾಷಾಶಾಸ್ತ್ರಜ್ಞರ ಪ್ರಕಾರ ಸಂಸ್ಕೃತ “ಇಂಡೋ ಐರೋಪ್ಯ ಭಾಷಾ ಕುಟುಂಬ” ಕ್ಕೆ ಸೇರಿದ್ದು, ಕನ್ನಡ “ದ್ರಾವಿಡ ಭಾಷಾ ಕುಟುಂಬ”ಕ್ಕೆ ಸೇರಿದ್ದು, ನಮ್ಮ ದೃಷ್ಟಿಯಲ್ಲಿ ಸಂಸ್ಕೃತ ಮತ್ತು ಕನ್ನಡದ ಸಂಬಂಧ ತಾಯಿ-ಮಗಳ ಸಂಬಂಧ ಅಲ್ಲ ಸಾಕುತಾಯಿ-ಸಾಕುಮಗಳ ಸಂಬಂಧ. ಕಾಳಿದಾಸನು ಸಂಸ್ಕೃತದಲ್ಲಿ “ಕಖಗಘ” ಅಕ್ಷರಪುಂಜ ಬಳಸಿ ರಚಿಸಿದ “ಸಮಸ್ಯಾಪೂರ್ತಿ” ಶ್ಲೋಕ ಮತ್ತು ಅದನ್ನು ಆಧರಿಸಿ ಬರೆದ ನಮ್ಮ ಕನ್ನಡ ಕವಿತೆಯೊಂದಿಗೆ ಓದುಗರೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆಗಳು:

ಕಾ ತ್ವಂ ಬಾಲೇ? ಕಾಂಚನಮಾಲಾ
ಕಸ್ಯಾಃ ಪುತ್ರೀ? ಕನಕಲತಾಯಾಃ।
ಕಿಂ ತೇ ಹಸ್ತೇ? ತಾಲೀ ಪತ್ರಂ
ಕಾವಾರೇಖಾ? “ಕಖಗಘ”||

(ಓ ಬಾಲೆ ನೀನಾರು? “ನಾನೋರ್ವ ಕನ್ನಡತಿ”
ನೀನಾರ ಮಗಳಮ್ಮ? “ಕನ್ನಡಾಂಬೆಯ ಕುವರಿ”|
ಏನಿಹುದು ಕೈಯೊಳಗೆ? “ತಾಡೋಲೆ ಗರಿಯು”
ಬರೆದಿರುವೆ ಏನಲ್ಲಿ? “ಸಿರಿಗನ್ನಡಂ ಗೆಲ್ಗೆ!”
“ಸಿರಿಗನ್ನಡಂ ಬಾಳ್ಗೆ!”)

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಅಂಕಣ

To Top