ದಾವಣಗೆರೆ: ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ರಾತ್ರಿ ವೇಳೆ ಶ್ರೀಗಂಧ ಮರ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿಯಿಂದ 3,15,000/- ರೂಪಾಯಿ ಬೆಲೆ ಬಾಳುವ 45 ಕೆಜಿ ಶ್ರೀಗಂಧದ ಮರದ ತುಂಡುಗಳು ಮತ್ತು ಚಕ್ಕೆಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಗರಗಸವನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಸಂತೇಬೆನ್ನೂರು ಪೊಲೀಸ್ ಠಾಣಾ ಸರಹದ್ದಿನ ಕಾಶೀಪುರ ಕ್ಯಾಂಪಿನ ಅಡಿಕೆ ತೋಟದಲ್ಲಿದ್ದ ಶ್ರೀಗಂಧದ ಮರ ಕಳುವಾದ ಪ್ರಕರಣ, ಚನ್ನಗಿರಿ ಪೊಲೀಸ್ ಠಾಣಾ ಸರಹದ್ದಿನ ಚನ್ನಗಿರಿ ಟೌನ್ ಕೋರ್ಟ್ ಮುಂಭಾಗದ ಆವರಣದಲ್ಲಿದ್ದ ಶ್ರೀಗಂಧದ ಮರ ಕಳುವಾದ ಒಟ್ಟು ಎರಡು ಶ್ರೀಗಂಧದ ಮರ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.
ಚನ್ನಗಿರಿ ಉಪವಿಭಾಗದ ಠಾಣಾ ಸರಹದ್ದುಗಳಲ್ಲಿ ಶ್ರೀಗಂಧ ಮರ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳನ್ನು ಪತ್ತೆ ಮಾಡಲು ಎಎಸ್ಪಿಗಳಾದ ವಿಜಯಕುಮಾರ್ ಎಂ. ಸಂತೋಷ್ ಮತ್ತು ಜಿ. ಮಂಜುನಾಥ್ ಹಾಗೂ ಚನ್ನಗಿರಿ ಉಪವಿಭಾಗದ ಪ್ರಭಾರ ಡಿವೈಎಸ್ಪಿ ಪದ್ಮಶ್ರೀ ಗುಂಜಿಕರ್ ಮತ್ತು ಸಿಪಿಐ ಸಂತೇಬೆನ್ನೂರು ವೃತ್ತ ನಿರೀಕ್ಷಕ ಲಿಂಗನಗೌಡ ನೆಗಳೂರು ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ಪೊಲೀಸ್ ಠಾಣೆಯ ಪಿಎಸ್ಐ ಜಗದೀಶ್ ಮತ್ತು ಪಿಎಸ್ಐ ಚನ್ನವೀರಪ್ಪ ನೇತೃತ್ವದಲ್ಲಿ ಸಿಬ್ಬಂದಿ ವೀರಭದ್ರಪ್ಪ, ರುದ್ರೇಶ್, ಸತೀಶ್, ರಾಘವೇಂದ್ರ, ಸಂತೋಷ್, ನಾಗರಾಜ, ಜಗದೀಶ್, ರೇವಣಸಿದ್ದಪ್ಪ, ಸಂತೋಷ್ ಪಾಟೀಲ್ ಒಳಗೊಂಡ ತಂಡ ರಚನೆ ಮಾಡಲಾಗಿತ್ತು.
ಈ ತಂಡವು ದಿನಾಂಕ:22/10/2024 ರಂದು ಚನ್ನಗಿರಿ ತಾಲ್ಲೂಕಿನ ಕೆರೆಬಿಳಚಿ ಕ್ಯಾಂಪ್ ನ ಎಳನೀರು ಕೀಳುವ ಕೆಲಸ ಮಾಡುವ ಸಲ್ಮಾನ್ ಖಾನ್ (25) ಬಂಧಿಸಲಾಗಿದೆ. ಆರೋಪಿಯಿಂದ ಸುಮಾರು 3,15,000/- ರೂಪಾಯಿ ಬೆಲೆ ಬಾಳುವ 45 ಕೆಜಿ ಶ್ರೀಗಂಧದ ಮರದ ತುಂಡುಗಳು ಮತ್ತು ಚಕ್ಕೆಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಗರಗಸವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಉಮಾ ಪ್ರಶಾಂತ್ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.



