ಬೆಂಗಳೂರು: ಪಶುಪಾಲನಾ ಇಲಾಖೆಯಲ್ಲಿಖಾಲಿ ಇರುವ 700 ಡಿ ಗ್ರೂಪ್ ನೌಕರರ ನೇಮಕಾತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮತಿ ನೀಡಿದ್ದು, ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ತಿಳಿಸಿದ್ದಾರೆ.
ಸರ್ಕಾರ ಅಧಿಕಾರಕ್ಕೆ ಬಂದ ನಂತರ 400 ಪಶು ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. 400 ಕಾಯಂ ವೈದ್ಯರ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ ಮಟ್ಟದಲ್ಲಿ ಪ್ರಕ್ರಿಯೆ ನಡೆದಿದೆ. ಇದರ ಜೊತೆ 700 ಡಿ ಗ್ರೂಪ್ ನೌಕರರ ನೇಮಕಾತಿಗೆ ನಡೆಯಲಿದೆ ಎಂದಿದ್ದಾರೆ.
ರಾಜ್ಯದಲ್ಲಿ ಖಾಸಗಿ ಪಶುವೈದ್ಯ ಕಾಲೇಜು ಆರಂಭಿಸಲು ನಿರ್ಬಂಧ ಇದೆ. ಹೊಸದಾಗಿ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಕೊಕಟನೂರ ಹಾಗೂ ಪುತ್ತೂರಲ್ಲಿ ಸರ್ಕಾರಿ ಕಾಲೇಜುಗಳನ್ನು ಈ ವರ್ಷವೇ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.



