ದಾವಣಗೆರೆ: ಚಲಿಸುತ್ತಿದ್ದ ರೈಲಿನಿಂದ ಹೊರಗೆ ಜಿಗಿದ ಯುವಕನ ಪ್ರಾಣವನ್ನು ಆರ್ ಪಿಎಫ್ ಮುಖ್ಯ ಮುಖ್ಯ ಪೇದೆಯೊಬ್ಬರು ರಕ್ಷಣೆ ಮಾಡಿದ ಘಟನೆ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದ ಪ್ರಜ್ವಲ್ (18) ಚಲಿಸುತ್ತಿದ್ದ ರೈಲಿಗೆ ಸಿಲುಕಿದ್ದ ಯುವಕ. ದಾವಣಗೆರೆ ರೈಲ್ವೆಯ
ಆರ್ ಪಿಎಫ್ ಮುಖ್ಯ ಪೇದೆಸತೀಶ್ ಬೆಂಕಿಕೆರೆ ಯುವಕನ ಜೀವ ಉಳಿಸಿದವರು. ಪ್ರಜ್ವಲ್ ದುಗ್ಗಾವತಿ ಗ್ರಾಮದಿಂದ ಬ್ಯಾಡಗಿಗೆ ರೈಲಿನಲ್ಲಿ ಹೋಗಲು ಬಂದಿದ್ದ. ಶನಿವಾರ ದಾವಣಗೆರೆಯಲ್ಲಿ ಹಿಂದೂ ಮಹಾ ಗಣಪತಿ ವಿಸರ್ಜನಾ ಶೋಭಾಯಾತ್ರೆ ಮೆರವಣಿಗೆ ಮುಗಿಸಿಕೊಂಡು ರಾತ್ರಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾನೆ. ಮೈಸೂರಿನಿಂದ ಸೋಲ್ಲಾಪುರಕ್ಕೆ ಹೋಗುವ ಗೋಲ್ ಗುಂಬಜ್ ರೈಲು ರಾತ್ರಿ 11.30 ಗಂಟೆ ಸುಮಾರಿಗೆ ನಿಲ್ದಾಣದ 1ನೇ ಪ್ಲಾಟ್ ಫಾರಂಗೆ ಆಗಮಿಸಿದೆ. ನಿಲುಗಡೆಯಾದ ಕೂಡಲೇ ಸಾಮಾನ್ಯ ಬೋಗಿಯಲ್ಲಿ ಹತ್ತಿದ ಪ್ರಜ್ವಲ್ ಬ್ಯಾಡಗಿಗೆ ನಿಲುಗಡೆ ಇದೆಯೇ ಎಂದು ಒಬ್ಬರನ್ನು ಕೇಳಿದ್ದಾನೆ. ಅವರು ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.
ಅಷ್ಟರಲ್ಲಿ ರೈಲು ಚಲಿಸಲು ಮುಂದಾಗಿದೆ. ತಕ್ಷಣವೇ ದಿಕ್ಕು ತೋಚದ ಪ್ರಜ್ವಲ್ ರೈಲಿನಿಂದ ಹೊರಗೆ ಜಿಗಿದಿದ್ದಾನೆ. ಈ ಆತುರದಲ್ಲಿ ಇನ್ನೇನು ರೈಲಿನ ಕೆಳಗೆ ಬೀಳಬೇಕೆನ್ನುವಷ್ಟರಲ್ಲಿ ಅಲ್ಲೇ ನಿಂತಿದ್ದ ಮುಖ್ಯ ಪೇದೆ ಸತೀಶ್ ಬೆಂಕಿಕೆರೆ, ಕ್ಷಣಾರ್ಧದಲ್ಲಿ ಜೀವ ಕಳೆದುಕೊಳ್ಳುತ್ತಿದ್ದ ಪ್ರಜ್ವಲ್ ರಕ್ಷಣೆ ಮಾಡಿದ್ದಾರೆ. ಘಟನೆಯಲ್ಲಿ ಯುವಕನ ಕೈ, ಕಾಲು ಪರಚಿದ್ದು ಕಚೇರಿಗೆ ಕರೆದುಕೊಂಡು ಹೋಗಿ ನೀರು ಕುಡಿಸಿ ಸಂತೈಸಲಾಗಿದೆ ಎಂದು ರೈಲ್ವೆ ಪೊಲೀಸ್ ಇನ್ಸ್ ಪೆಕ್ಟರ್ ಕುಬೇರಪ್ಪ ಮಾಹಿತಿ ನೀಡಿದ್ದಾರೆ.