ದಾವಣಗೆರೆ: ಮನೆ ಬಾಡಿಗೆ ಕೊಟ್ಟ ಮಾಲೀಕರ ಮನೆಯಲ್ಲಿಯೇ ಕಳ್ಳತನ ಮಾಡಿ ಪರಾರಿಯಾದ ಮಹಿಳೆಯನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 3,24,800 ರೂ. ಬೆಲೆಯ 63 ಗ್ರಾಂ ತೂಕದ ಬಂಗಾರದ ಆಭರಣ ವಶಪಡಿಸಿಕೊಳ್ಳಲಾಗಿದೆ.
ಭಗತ್ ಸಿಂಗ್ ನಗರದ ಮನೆ ಮಾಲೀಕ ಪಿ. ಪ್ರಕಾಶ್ ಎಂಬುವವರ ಮನೆಯಲ್ಲಿದ್ದ 63 ಗ್ರಾಂ ಬಂಗಾರದ ಆಭರಣಗಳು ಕಳ್ಳತನವಾಗಿದ್ದು, ನಮ್ಮ ಮನೆಯ 1 ನೇ ಮಹಡಿಯ ಮನೆಯಲ್ಲಿ ಬಾಡಿಗೆಗೆ ಇದ್ದ ತನುಜಾ ಎಂಬುವವರ ಮೇಲೆ ಅನುಮಾನವಿದೆ ಎಂದು ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಕೇಸಿನಲ್ಲಿ ಆರೋಪಿ ಪತ್ತೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಮ್. ಸಂತೋಷ್ ಮತ್ತು ಮಂಜುನಾಥ. ಜಿ. ಹಾಗೂ ದಾವಣಗೆರೆ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ್ ಹೆಚ್.ಎಸ್ ಮತ್ತು ಪಿ.ಎಸ್.ಐ ಸಾಗರ್ ಅತ್ತರವಾಲಾ ಹಾಗೂ ಸಿಬ್ಬಂದಿಯವರನ್ನು ಒಳಗೊಂಡ ತಂಡವನ್ನು ರಚನೆ ಮಾಡಲಾಗಿತ್ತು.
ಈ ತಂಡವು ಪ್ರಕರಣದ ಆರೋಪಿತಳಾದ ತನುಜಾ.ವಿ (24) ಗೃಹಿಣಿ, ಕೊಟ್ಟೂರೇಶ್ವರ ಬಡಾವಣೆ, ನಿಟ್ಟುವಳ್ಳಿಯಲ್ಲಿ ವಾಸ, ಸ್ವಂತ ಊರು ಐಗೂರು ಗ್ರಾಮ. ಇವರನ್ನು ಬಂಧಿಸಿದ್ದಾರೆ. ಆರೋಪಿತಳಿಂದ ಒಟ್ಟು 3,24,800/-ರೂ ಬೆಲೆಯ 63 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪತ್ತೆ ಕಾರ್ಯ ನಡೆಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.



