ದಾವಣಗೆರೆ: ವರದಕ್ಷಿಣೆ ಕಿರುಕುಳದಿಂದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಬಂಧಿಸಿದಂತೆ ಆತ್ಮಹತ್ಯೆಗೆ ಪ್ರಚೋದಿಸಿದ ಪತಿಗೆ 7 ವರ್ಷ ಜೈಲು ಹಾಗೂ 25 ಸಾವಿರ ದಂಡ ವಿಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಮಾನಮಟ್ಟಿ ಗ್ರಾಮದ ಯೋಗೇಶ್ ಶಿಕ್ಷೆಗೆ ಗುರಿಯಾದ ಅಪರಾಧಿ. ಪತ್ನಿ ಸುಮಿತ್ರಾ 2019ರ ಫೆ.27ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ದಂಡದ ಮೊತ್ತದಲ್ಲಿ 20 ಸಾವಿರವನ್ನು ಸಂತ್ರಸ್ತ ಕುಟುಂಬಕ್ಕೆ ನೀಡುವಂತೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್ ಆದೇಶದಲ್ಲಿ ತಿಳಿಸಿದ್ದಾರೆ.
ಯೋಗೇಶ್ ಹಾಗೂ ಸುಮಿತ್ರಾ ಪರಸ್ಪರ ಪ್ರೀತಿಸಿ 2018ರಲ್ಲಿ ವಿವಾಹವಾಗಿದ್ದರು. ಈ ವಿವಾಹಕ್ಕೆ ಯೋಗೇಶ್ ಕುಟುಂಬದ ಒಪ್ಪಿಗೆ ಇರಲಿಲ್ಲ. ಈ ವಿಚಾರವಾಗಿ ಆಗಾಗ ದಂಪತಿಯ ನಡುವೆ ಕಲಹ ಉಂಟಾಗುತ್ತಿತ್ತು. ಯೋಗೇಶ್, ವರದಕ್ಷಿಣೆಗಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದನು. ಇದರಿಂದ ಮನನೊಂದ ಸುಮಿತ್ರಾ ಆತ್ಮಹತ್ಯೆ ಶರಣಾಗಿದ್ದರು.
ಪ್ರಕರಣದ ತನಿಖೆ ನಡೆಸಿದ್ದ ಡಿವೈಎಸ್ಪಿ ಚಿಕ್ಕಸ್ವಾಮಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ವಕೀಲ ಕೆ.ಎಸ್.ಸತೀಶ್ ಕುಮಾರ್ ವಾದ ಮಂಡಿಸಿದ್ದರು.



