ದಾವಣಗೆರೆ: ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಸ್ಥಾನಕ್ಕೆ ಇಂದು (ಸೆ. 27) ಚುನಾವಣೆ ನಡೆಯಲಿದೆ. ಸಂಖ್ಯಾಬಲ ಬಲ ಹೊಂದಿರುವ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರ ಹಿಡಿಯುವುದು ಪಕ್ಕಾ ಆಗಿದೆ. ಬಿಜೆಪಿಗೆ ಸಂಖ್ಯಾ ಬಲ ಇಲ್ಲದಿದ್ದರೂ ಮೇಯರ್- ಉಪ ಮೇಯರ್ ಸ್ಥಾನಗಳಿಗೆ ಸ್ಪರ್ಧಿಸಲಿದೆ.
ಪಾಲಿಕೆ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ಮೇಯರ್-ಉಪ ಮೇಯರ್ ಸ್ಥಾನಗಳಿಗೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅಧ್ಯಕ್ಷತೆಯಲ್ಲಿ ಚುನಾವಣಾ ಸಭೆ ನಡೆಯಲಿದೆ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮೇಯರ್-ಉಪ ಮೇಯರ್ ಸ್ಥಾನಗಳು ಒಲಿಯುವುದು ಸ್ಪಷ್ಟವಾಗಿದೆ. ಮೇಯರ್ ಸ್ಥಾನ ಬಿಸಿಎಂ ಎ ವರ್ಗಕ್ಕೆ, ಉಪ ಮೇಯರ್ ಸ್ಥಾನ ಬಿಸಿಎಂ ಬಿ ವರ್ಗಕ್ಕೆ ಮೀಸಲಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಮೇಯರ್- ಉಪ ಮೇಯರ್ ಸ್ಥಾನಕ್ಕೆ ಯಾರು ಅಭ್ಯರ್ಥಿಗಳು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಮೇಯರ್ ಸ್ಥಾನಕ್ಕೆ ಆರೇಳು ಜನ ಆಕಾಂಕ್ಷಿಗಳಿದ್ದಾರೆ. ಮುಖ್ಯವಾಗಿ ಎ.ಬಿ.ರಹೀಂ ಸಾಬ್, ಕೆ.ಚಮನ್ ಸಾಬ್, ಅಬ್ದುಲ್ ಲತೀಫ್ ವಾಲಿಕಾರ್, ಜಾಕೀರ್ ಅಲಿ, ಉರ್ಬಾನ್ ಪಂಡಿತ್ ಹೆಸರು ಕೇಳಿ ಬಂದರೂ, ಪ್ರಮುಖವಾಗಿ ಎಎ್ಮೂರು ಹೆಸರು ಚಾಲ್ತಿಯಲ್ಲಿವೆ. ಉಪ ಮೇಯರ್ ಸ್ಥಾನಕ್ಕೆ ಬಸಾಪುರದ ಶಿವಲೀಲಾ ಕೊಟ್ರಯ್ಯ ಆಕಾಂಕ್ಷಿ ಆಗಿದ್ದಾರೆ. ಕಾಂಗ್ರೆಸ್ಸಿನಲ್ಲಿ ಎಷ್ಟೇ ಪ್ರಯತ್ನಪಟ್ಟರೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳುವವರು ಅಭ್ಯರ್ಥಿಯಾಗುತ್ತಾರೆ.
ಮೇಯರ್- ಉಪ ಮೇಯರ್ ಅಭ್ಯರ್ಥಿಗಳು ಯಾರು ಆಗಬೇಕೆಂಬುದನ್ನು ಕಾಂಗ್ರೆಸ್ಸಿನ ಜಿಲ್ಲಾ ಹೈಕಮಾಂಡ್ ಆದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ,ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಚರ್ಚಿಸುತ್ತಾರೆ. ಯಾರು ಏನೇ ಚರ್ಚಿಸಿದರೂ ಅಂತಿಮವಾಗಿ ಯಾರ ಹೆಸರಿನ ಲಕೋಟೆಯನ್ನು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕಳಿಸುತ್ತಾರೋ, ಅದೇ ಅಂತಿಮ ಆಗಲಿದೆ.
ಬಿಜೆಪಿಯಿಂದ ಬಿಸಿಎಂ ಎ ವರ್ಗಕ್ಕೆ ಸೇರಿದ ಹಾಲಿ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ ಮೇಯರ್ ಸ್ಥಾನಕ್ಕೆ, ಉಪ ಮೇಯರ್ ಸ್ಥಾನಕ್ಕೆ ಕೆ.ಎಂ.ವೀರೇಶ ಪೈಲ್ವಾನ್ ಸ್ಪರ್ಧಿಸುವ ಸಾಧ್ಯತೆ ಇದೆ.



