ಹಾವೇರಿ: ಪತ್ನಿಯನ್ನು ತನ್ನ ಜೊತೆ ಕಳುಹಿಸಲಿಲ್ಲವೆಂಬ ಕಾರಣಕ್ಕೆ ಮಾವನ ಜಮೀನಿನ ನೂರಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಕಡಿದು ಹಾಕಿ ಘಟನೆ ನಡೆದಿದೆ.
ಈ ಘಟನೆ ಹಾನಗಲ್ ತಾಲ್ಲೂಕಿನ ಬಸಾಪುರ ಗ್ರಾಮದ ನಡೆದಿದ್ದು, ದೇವೇಂದ್ರಪ್ಪ ಫಕ್ಕೀರಪ್ಪ ಗಾಣಿಗೇರ (55) ಅವರ ಅಡಿಕೆ ಗಿಡವನ್ನು ಅಳಿಯ ಬಸವರಾಜ ಕಡಿದು ಹಾಕಿದ್ದಾನೆ. ಈ ಬಗ್ಗೆ ಆಡೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದೇವೇಂದ್ರಪ್ಪ, ತಮ್ಮ ಮಗಳನ್ನು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಬಸವರಾಜನಿಗೆ 10 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದರು. ಮದ್ಯ ವ್ಯಸನಿಯಾಗಿದ್ದ ಆರೋಪಿ ಬಸವರಾಜ, ಪತ್ನಿ ಜೊತೆ ನಿತ್ಯವೂ ಜಗಳ ಮಾಡಲಾರಂಭಿಸಿದ್ದ. ತವರು ಮನೆಯವರು ಎಚ್ಚರಿಕೆ ನೀಡಿದರೂ ಬಸವರಾಜ ಸುಧಾರಿಸಿರಲಿಲ್ಲ.
ಇದರಿಂದ ಬೇಸತ್ತ ದೇವೇಂದ್ರಪ್ಪ ಅವರ ಮಗಳು, ಗಂಡನ ಮನೆ ಬಿಟ್ಟು ಬಂದು ತವರು ಮನೆಯಲ್ಲಿ ಉಳಿದುಕೊಂಡಿದ್ದರು. ಪತ್ನಿಯನ್ನು ಮನೆಗೆ ಕಳುಹಿಸುವಂತೆ ಬಸವರಾಜ ಹಲವು ಬಾರಿ ಒತ್ತಾಯಿಸಿದ್ದ. ಆದರೆ, ಮದ್ಯ ಕುಡಿಯುವುದನ್ನು ಬಿಡುವಂತೆ ತವರು ಮನೆಯವರು ಹೇಳಿದ್ದರು. ಆದರೆ, ಬಸವರಾಜ ಮದ್ಯ ಬಿಟ್ಟಿರಲಿಲ್ಲ.ಇದರಿಂದ ಸಿಟ್ಟಿಗೆದ್ದು 106 ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದಾನೆ.