ಡಿವಿಜಿ ಸುದ್ದಿ, ಹಳೇಬೀಡು: ಸದಾ ರೈತರಪರ ಕಾಳಿಜಿ ಹೊಂದಿರುವ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ಕಾಲ ಕಾಲಕ್ಕೆ ಸರ್ಕಾರಕ್ಕೆ ತಪ್ಪು-ಒಪ್ಪುಗಳನ್ನು ತಿದ್ದುವ ರಾಜಗುರು ಇದ್ದಂತೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅಭಿಪ್ರಾಯಪಟ್ಟರು.

ಸಿರಿಗೆರೆಯ ತರಳಬಾಳು ಹುಣ್ಣಿಮೆ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕೆರೆ-ಕಟ್ಟೆ ತುಂಬಿಸುವುದು, ರೈತರ ಆದಾಯ ದ್ವಿಗುಣ ಮಾಡುವಲ್ಲಿ ಸದಾ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಶ್ರೀಗಳು ಕಾಲ ಕಾಲಕ್ಕೆ ಸರ್ಕಾರವನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ. ಫಸಲ್ ಭಿಮಾ ಯೋಜನೆಯಿಂದ ಆದ ತೊಂದರೆಯನ್ನು ಸರ್ಕಾರಕ್ಕೆ ನೇರವಾಗಿ ಹೇಳುವ ಮೂಲಕ ನಮಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.
ತರಳಬಾಳು ಹುಣ್ಣಿಮೆ ಮಹೋತ್ಸವ ನಾಡಿನ ಹಬ್ಬದಂತಾಗಿದ್ದು, ನಾಡಿನಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕೆ ಮಾದರಿಯಾಗಿದೆ. ಶ್ರೀ ಮಠವು ಅನ್ನ, ಅಕ್ಷ ದಾಸೋಹದ ಮೂಲಕ ಮಾದರಿ ಮಠವಾಗಿದೆ. ಭಕ್ತರ ಸುಖ-ದುಖಃದಲ್ಲಿ ಸದಾ ತೊಡಗಿಕೊಳ್ಳುವ ಶ್ರೀಗಳು, ಬರಗಾಲವಿದ್ದ ಸಮಯದಲ್ಲಿ ಹುಣ್ಣಿಮೆ ಮಹೋತ್ಸವ ಮುಂದೂಡಿ ರೈತರ ನೆರವಿಗೆ ಧಾವಿಸುತ್ತಿದ್ದಾರೆ. ಇದಲ್ಲದೆ, ಪ್ರವಾಹದ ಸಂದರ್ಭದಲ್ಲಿ ನೆರ ಸಂಸ್ರಸ್ತರ ಮಕ್ಕಳಿಗೆ 1 ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿದ್ದರು. ಪ್ರಸ್ತುತ 500 ಮಕ್ಕಳಿಗೆ ಶ್ರೀ ಮಠದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಣ, ಕಲೆ , ಸಾಹಿತ್ಯ,ನ್ಯಾಯಪೀಠ, ರೈತಪರ ಕಾಳಜಿ, ಸಾಮಾಜಿಕ ಕಳಕಳಿ ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದರು.



