ಡಿವಿಜಿ ಸುದ್ದಿ, ಚಿತ್ರದುರ್ಗ: ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿದ್ದು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹುಡುಕಿದದರೂ ಯಾರು ಸಿಗುತ್ತಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದರು.
ಚಿತ್ರದುರ್ಗ ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ ಅವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಸೇರಿ ಈ ರಾಜ್ಯವನ್ನು ಲೂಟಿ ಮಾಡಿದರು. ಹೀಗಾಗಿ ಅವರಿಂದ ಬೇಸತ್ತ 17 ಜನ ಶಾಸಕರು ಬಿಜೆಪಿಗೆ ಬಂದಿದ್ದಾರೆ. ಅವರ ಬಲದಿಂದ ಬಿಜೆಪಿ ಸರ್ಕಾರ ಬಂದಿದೆ. ಅಲ್ಲದೇ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಧ್ಯಕ್ಷರು ರಾಜೀನಾಮೆ ನೀಡಿ ಎರಡ್ಮೂರು ತಿಂಗಳು ಕಳೆದರೂ, ಹೊಸ ಅಧ್ಯಕ್ಷರ ನೇಮಕವಾಗಿಲ್ಲ ಎಂದರು.
ಡಿಕೆ ಶಿವಕುಮಾರ್ ಅಧ್ಯಕ್ಷರಾದರೆ ಸಿದ್ದರಾಮಯ್ಯ ಅವರು ಒಪ್ಪಲ್ಲ. ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದರೆ ಡಿಕೆಶಿ ಒಪ್ಪಲ್ಲ. ಯಾರನ್ನೇ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆ ಮಾಡಿದರೂ ಸಹ ಸಿದ್ಧರಾಮಯ್ಯ ಪಕ್ಷ ಬಿಡುವ ಸೂಚನೆ ಅರಿತು ಕಾಂಗ್ರೆಸ್ ಹೈಕಮಾಂಡ್, ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುತ್ತಿಲ್ಲ. ಮುಂದಿನ 10 ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ರಾಜ್ಯದ ಜನರು ಬಿಎಸ್‍ವೈ ಅವರನ್ನು ಬಯಸುತ್ತಿದ್ದು, ಉಳಿದ ಮೂರು ವರ್ಷದ ಅಧಿಕಾರ ಪೂರ್ಣಗೊಳಿಸಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.



