ಡಿವಿಜಿ ಸುದ್ದಿ, ದಾವಣಗೆರೆ: ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ನೀಡುವುದನ್ನು ನಿಲ್ಲಿಸುವ ಸರ್ಕಾರದ ತೀರ್ಮಾನವನ್ನು ಟೀಕಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾವು ಅಧಿಕಾರದಲ್ಲಿ ಇದ್ದಾಗ ಹಣ ಇತ್ತು. ಈಗ ಯಾಕೆ ಇಲ್ಲ. ಅದಕ್ಕೆ ಇದೊಂದು ದರಿದ್ರ ಸರ್ಕಾರ ಎಂದು ಕರೆಯಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹರಿಹರದ ರಾಜನಹಳ್ಳಿಯಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಯಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಲು ನಮ್ಮ ಸರ್ಕಾರ ಸಮರ್ಪಕವಾಗಿ ಹಣ ನೀಡಿತ್ತು. ಆದರೆ, ಬಿಜೆಪಿ ಸರ್ಕಾರ ಬಂದಾಗ ಮಾತ್ರ ಹಣ ಇಲ್ಲದಾಗಿದೆ. 2.50 ಸಾವಿರ ಕೋಟಿ ಬಜೆಟ್ ನಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಲು 300 ಕೋಟಿಯಷ್ಟು ಹಣ ಮೀಸಲಿಡಲು ಸಾಧ್ಯವಾಗುವುದಿಲ್ಲವೇ..? ಅದಕ್ಕೆ, ಇದನ್ನು ದರಿದ್ರ ಸರ್ಕಾರ ಎಂದು ಕರೆಯದು ಎಂದರು.
ಸರ್ಕಾರ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡುವ ಯೋಜನೆಯನ್ನು ನಿಲ್ಲಿಸಬಾರದು ಎಂದು ಕಿಡಿಕಾರಿದರು. ಇನ್ನು ಸಚಿವ ಬಿ.ಸಿ. ಪಾಟೀಲ್ ಏನು ಓದಿಕೊಂಡಿದ್ದಾನೋ ನನಗೆ ಗೊತ್ತಿಲ್ಲ. ಅವರಿಗೆ ಕಾನೂನಿನ ಗೊತ್ತಿಲ್ಲ.ಹೀಗಾಗಿ ಈ ರೀತಿ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದರು. ಸಿದ್ದರಾಮಯ್ಯ ಕಾನೂನು ಪದವಿ ಓದಿಲ್ಲ. ಯಾವುದಾದ್ರೂ ಫೇಕ್ ಸರ್ಟಿಫಿಕೆಟ್ ತಂದು ವಕೀಲ ವೃತ್ತಿ ಮಾಡಿರಬಹುದು ಎಂದು ಸಚಿವ ಬಿ.ಸಿ ಪಾಟೀಲ್ ಟೀಕಿಸಿದ್ದರು.



