ದಾವಣಗೆರೆ: ಅಪ್ರಾಪ್ತೆ ಯುವತಿಗೆ ಪ್ರೀತಿಸುವಂತೆ ಪೀಡಿಸಿದ್ದಲ್ಲದೆ, ಫ್ಲೆಕ್ಸ್ ಹಾಕಿ ಮಾನಹಾನಿ ಮಾಡಿದ್ದವನಿಗೆ ದಾವಣಗೆರೆಯ ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ-1 ನ್ಯಾಯಾಲಯ 6 ತಿಂಗಳು ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿದೆ.
ದಾವಣಗೆರೆಯ ನಿಟುವಳ್ಳಿ ನಿವಾಸಿ ಅಲ್ತಾಫ್(22) ಶಿಕ್ಷೆಗೆ ಒಳಗಾದವನು. ಈತ 16 ವರ್ಷದ ಅಪ್ರಾಪ್ತೆಯನ್ನ ಪ್ರೀತಿಸುವನತೆ ಪೀಡಿಸಿ ಚುಡಾಯಿಸುತ್ತಿದ್ದನು. ಪ್ರೀತಿ ಮಾಡಲಿಲ್ಲವೆಂದ್ರೆ ಮುಖಕ್ಕೆ ಆಸಿಡ್ ಹಾಕಿ, ಅಪಹರಿಸಿ, ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದನು. ಇದಲ್ಲದೆ, ವಾಟ್ಸಾಪ್ ಡಿಪಿಯಲ್ಲಿನ ಫೋಟೋ ತೆಗೆದುಕೊಂಡು ಅವನ ಫೋಟೋದ ಜೊತೆಗೆ ಯುವತಿ ಫೋಟೋ ಸೇರಿಸಿ ನಗರದ ಎಚ್. ಕೆ. ಆರ್ ಸರ್ಕಲ್ ಬಳಿ ಫ್ಲೆಕ್ಸ್ ಹಾಕಿದ್ದನು.
ಅಲ್ತಾಫ್ ವಿರುದ್ಧ ಬಾಲಕಿಯ ತಂದೆ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡ ಮಹಿಳಾ ಪೊಲೀಸ್ ಠಾಣಾ ವೃತ್ತ ನಿರೀಕ್ಷಕಿ ಮಲ್ಲಮ್ಮ ಚೌಬೆ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ-1 ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ರಾಮ ನಾರಾಯಣ ಹೆಗಡೆ ರವರು ಆರೋಪಿಗೆ 6 ತಿಂಗಳು ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ದಂಡದ ಹಣವನ್ನು ಸಂತ್ರಸ್ತೆಗೆ ನೀಡುವಂತೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಸುನಂದಾ ಮಡಿವಾಳರ್ ವಾದ ಮಂಡಿಸಿದ್ದರು.



