ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು, ಒಳನಾಡಿನಲ್ಲಿ ಮುಂದಿನ ಎರಡ್ಮೂರು ದಿನ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿಯ ಸಂಚಾರ ಚುರುಕುಗೊಂಡಿದೆ. ಹೀಗಾಗಿ ಜುಲೈ 26 ರವರೆಗೆ ಕರಾವಳಿ, ಮಲೆನಾಡು ದಕ್ಷಿಣ ಒಳನಾಡು ಭಾಗದಲ್ಲಿ ಮುಂಗಾರ ಮಳೆ ಮತ್ತಷ್ಟು ಅಬ್ಬರಿಸಲಿದೆ.
ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಭರ್ಜರಿ ಮಳೆ ಬೀಳಲಿರುವ ಕಡೆ ಶಾಲೆ, ಕಾಲೇಜ್ ಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಜಿಲ್ಲೆಗಳಿಗೆ ಜುಲೈ 24 ರಿಂದ 26 ರವರೆಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಶಿವಮೊಗ್ಗ, ಕೊಡಗು & ಚಿಕ್ಕಮಗಳೂರು ಜಿಲ್ಲೆಗಳಿಗೆ ಕೂಡ ಜುಲೈ 24ರವರೆಗೆ ಯೆಲ್ಲೋ ಅಲರ್ಟ್ ಇದೆ. ಈ ನಡುವೆ ಬೆಳಗಾವಿ ಜಿಲ್ಲೆಯಲ್ಲಿ ಇಂದು ಭರ್ಜರಿ ಮಳೆ ಬೀಳುವ ಕಾರಣಕ್ಕೆ ಬೆಳಗಾವಿ, ಖಾನಾಪುರ, ಕಿತ್ತೂರು ಹಾಗೂ ಬೈಲಹೊಂಗಲ ತಾಲೂಕಿನಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಬಂಗಾಳಕೊಲ್ಲಿ, ಅರಬ್ಬಿ ಸಮುದ್ರದಲ್ಲಿ ಎರಡು ವಾರದಿಂದ ಸುಳಿಗಾಳಿ (ಸ್ಟ್ರಫ್) ವಾತಾವರಣ ತೀವ್ರಗೊಂಡಿದೆ. ಇದು ವಾಯುಭಾರ ಕುಸಿತಕ್ಕೆ ಕಾರಣವಾಗಿದ್ದು, ಇದರಿಂದ ರಾಜ್ಯದ ಎಲ್ಲಡೆ ಭಾರೀ ಮಳೆಯಾಗುತ್ತಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯ ವೇಗವು ಪ್ರತಿ ಗಂಟೆಗೆ 40-50 ಕಿಮೀ ಕಂಡು ಬರಲಿದೆ.
ಉತ್ತರ ಒಳನಾಡಿನಲ್ಲಿ ಬೆಳಗಾವಿಯಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಸೇರಿದಂತೆ ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಚದುರಿದ ಮಳೆಯಾಗಲಿದೆ.
ದಕ್ಷಿಣ ಒಳನಾಡಿನ ಸುತ್ತಮುತ್ತ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಹಗುರವಾದ ಮಳೆಯಾಗುವ ಸಾಧ್ಯತೆಯಿದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಸೇರಿದಂತೆ ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಕೋಲಾರದಲ್ಲಿ ಮಳೆಯಾಗುವ ಸಾಧ್ಯತೆ ಇದೆ.