ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರದ ಮೊದಲ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಜುಲೈ 23) ಲೋಕಸಭೆಯಲ್ಲಿ 2024-2025ನೇ ಸಾಲಿನ ಬಜೆಟ್ ಮಂಡಿಸಿದ್ದರು. ಈ ಬಾರಿಯ ಮುಂಗಡ ಪತ್ರದಲ್ಲಿ ಯಾವ ವಸ್ತುಗಳ ಬೆಲೆ ಏರಿಕೆ, ಯಾವ ವಸ್ತುಗಳು ಇಳಿಕೆಎಂಬುದರ ಮಾಹಿತಿ ಇಲ್ಲಿದೆ…
ಯಾವುದು ಇಳಿಕೆ:
- ಕ್ಯಾನ್ಸರ್ ಔಷಧ
- ಪೆಟ್ರೋಲ್ ದರ 2 ರೂ. ಇಳಿಕೆ
- ಮೊಬೈಲ್ ಫೋನ್
- ಆಮದು ಚಿನ್ನ,
- ಆಮದು ಬೆಳ್ಳಿ
- ಚರ್ಮದ ವಸ್ತು
- ಸೀ ಫುಡ್
- ವಿದ್ಯುತ್ ತಂತಿ
- ಎಕ್ಸರೇ ಮೆಷಿನ್
- ಸೋಲಾರ್ ಪ್ಯಾನಲ್
ಯಾವುದು ಏರಿಕೆ:
- ವಿದ್ಯುತ್ ಉಪಕರಣ
- ಪ್ಲಾಸ್ಟಿಕ್
- ಬಟ್ಟೆ
- ಮೊಬೈಲ್ ಟವರ್
ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 6 ಕ್ಕೆ ಮತ್ತು ಪ್ಲಾಟಿನಂ ಮೇಲೆ ಶೇಕಡಾ 6.4 ಕ್ಕೆ ಇಳಿಸುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.
ಈ ಮೂಲಕ ಚಿನ್ನ ಮತ್ತು ಬೆಳ್ಳಿಯ ಮೇಲಿನ ಒಟ್ಟು ಆಮದು ಸುಂಕ ಈಗ 15% ರಿಂದ 11% ಕ್ಕೆ ಇಳಿಕೆಯಾಗಲಿದೆ. ಇದರ ಪರಿಣಾಮವಾಗಿ, 4% ರಷ್ಟು ಕಡಿಮೆ ಆಮದು ಸುಂಕದ ಅಂತರದಲ್ಲಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 2000 ರೂ.ವರೆಗೂ ಕಡಿಮೆಯಾಗಲಿದೆ. ಅಂದರೆ ಪ್ರಮುಖ ಮಾರುಕಟ್ಟೆಗಳಲ್ಲಿ ಚಿನ್ನದ ದರ 70,350 ಆಗಲಿದೆ. ಬೆಳ್ಳಿಯ ಬೆಲೆ ರೂ. 2500 ರೂ. ಇಳಿಕೆಯಾಗಿ 86,600 ಗೆ ಇಳಿಕೆ ಆಗಲಿದೆ.
ಮೊಬೈಲ್ ಪರಿಕರ, ಕ್ಯಾನ್ಸರ್ ಔಷಧಗಳ ಬೆಲೆಯೂ ಇಳಿಕೆ ಮೊಬೈಲ್‌ಗಳು ಮತ್ತು ಪರಿಕರಗಳ ಮೇಲಿನ ಸುಂಕವನ್ನು ಶೇಕಡಾ 15 ಕ್ಕೆ ಕಡಿತಗೊಳಿಸಲಾಗಿದೆ. ಸರ್ಕಾರವು ಫೆರೋ ನಿಕಲ್, ಬ್ಲಿಸ್ಟರ್ ತಾಮ್ರದ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ತೆಗೆದುಹಾಕಿದೆ. ಮೂರು ಕ್ಯಾನ್ಸರ್ ಚಿಕಿತ್ಸಾ ಔಷಧಗಳನ್ನು ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗಿದೆ. ಸೌರ ಫಲಕಗಳ ತಯಾರಿಕೆಯಲ್ಲಿ ಬಳಸಲಾಗುವ ವಿನಾಯಿತಿ ಪಡೆದ ಬಂಡವಾಳ ಸರಕುಗಳ ಪಟ್ಟಿಯನ್ನು ವಿಸ್ತರಿಸಲು ಹಣಕಾಸು ಸಚಿವರು ಪ್ರಸ್ತಾಪಿಸಿದೆ. ಸರಕಾರವು ನಿಗದಿತ ಟೆಲಿಕಾಂ ಉಪಕರಣಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು 10% ರಿಂದ 15% ಕ್ಕೆ ಹೆಚ್ಚಿಸಿದೆ.
2023 ರ ವಾರ್ಷಿಕ ಬಜೆಟ್‌ನಲ್ಲಿ, ಭಾರತದಲ್ಲಿ ಮೊಬೈಲ್ ಫೋನ್ ಉತ್ಪಾದನೆಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ ಕ್ಯಾಮೆರಾ ಲೆನ್ಸ್‌ಗಳು ಸೇರಿದಂತೆ ವಿವಿಧ ಘಟಕಗಳ ಮೇಲಿನ ಆಮದು ತೆರಿಗೆಗಳನ್ನು ಕಡಿಮೆ ಮಾಡುವುದಾಗಿ ಹಣಕಾಸು ಸಚಿವರು ಘೋಷಿಸಿದ್ದರು ಎಂಬುವುದು ಉಲ್ಲೇಖನೀಯ.
ಫೋನ್‌ಗಳು ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯವಾದ ಅಂಶವಾದ ಲಿಥಿಯಂ-ಐಯಾನ್ ಬ್ಯಾಟರಿಗಳ ಮೇಲಿನ ತೆರಿಗೆ ದರವನ್ನು ಹಣಕಾಸು ಸಚಿವರು ಕಡಿತಗೊಳಿಸಿದ್ದರು. ಈ ನೀತಿ ಬದಲಾವಣೆಯು ಕಂಪನಿಗಳು ಭಾರತದಲ್ಲಿ ಫೋನ್‌ಗಳನ್ನು ತಯಾರಿಸುವುದನ್ನು ಅಗ್ಗವಾಗಿಸುವ ಗುರಿಯನ್ನು ಹೊಂದಿದೆ ಎಂದು 2024 ರ ಆರ್ಥಿಕ ಸಮೀಕ್ಷೆಯು ಉಲ್ಲೇಖಿಸಿತ್ತು.
ಏಂಜೆಲ್ ಟ್ಯಾಕ್ಸ್ ರದ್ದು, ಸ್ಟಾರ್ಟ್‌ಪ್ ಸ್ಥಾಪನೆಗೆ ಉತ್ತೇಜನಎಲ್ಲಾ ಹೂಡಿಕೆದಾರರಿಗೆ ಏಂಜೆಲ್ ಟ್ಯಾಕ್ಸ್ ರದ್ದುಗೊಳಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಲೋಕಸಭೆಯಲ್ಲಿ 2024-25ರ ಬಜೆಟ್ ಮಂಡನೆ ಸಂದರ್ಭದಲ್ಲಿ ಈ ಘೋಷಣೆ ಮಾಡಲಾಗಿದೆ.
ಏಂಜೆಲ್ ಟ್ಯಾಕ್ಸ್ ಎನ್ನುವುದು ಸ್ಟಾರ್ಟಪ್‌ಗಳು ಏಂಜೆಲ್ ಹೂಡಿಕೆದಾರರಿಂದ ಪಡೆಯುವ ನಿಧಿಯ ಮೇಲೆ ವಿಧಿಸಲಾದ ತೆರಿಗೆಯಾಗಿದೆ. ಈ ತೆರಿಗೆಯನ್ನು 2012 ರಲ್ಲಿ ಭಾರತದಲ್ಲಿ ಪಟ್ಟಿ ಮಾಡದ ಕಂಪನಿಗಳಲ್ಲಿ ಹಣದುಬ್ಬರದ ಮೌಲ್ಯಗಳಲ್ಲಿ ಹೂಡಿಕೆ ಮಾಡುವ ಮೂಲಕ ಹಣ ವರ್ಗಾವಣೆಯನ್ನು ತಡೆಗಟ್ಟಲು ಪರಿಚಯಿಸಲಾಗಿತ್ತು. ವಿಶೇಷವಾಗಿ ಹೂಡಿಕೆಯ ಮೊತ್ತವು ಆರಂಭಿಕ ಷೇರುಗಳ ನ್ಯಾಯೋಚಿತ ಮಾರುಕಟ್ಟೆ ಮೌಲ್ಯವನ್ನು ಮೀರಿದಾಗ ಈ ತೆರಿಗೆ ವಿಧಿಸಲಾಗುತ್ತಿತ್ತು. ಸ್ವೀಕರಿಸಿದ ಮೊತ್ತ ಮತ್ತು ನ್ಯಾಯೋಚಿತ ಮಾರುಕಟ್ಟೆ ಮೌಲ್ಯದ ನಡುವಿನ ವ್ಯತ್ಯಾಸವನ್ನು ಆದಾಯವೆಂದು ಪರಿಗಣಿಸಲಾಗುತ್ತದೆ. ಅದಕ್ಕೆ ಅನುಗುಣವಾಗಿ ತೆರಿಗೆ ವಿಧಿಸಲಾಗುತ್ತದೆ. ಆದರೆ ಈ ತೆರಿಗೆಯ ಮೇಲೆ ವಿನಾಯಿತಿಯನ್ನು ಘೋಷಣೆ ಮಾಡಲಾಗಿದೆ.
ವೆಂಚರ್ ಕ್ಯಾಪಿಟಲಿಸ್ಟ್‌ಗಳು ಮತ್ತು ಉದ್ಯಮ ತಜ್ಞರು ಭಾರತದಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಹೆಚ್ಚು ಅನುಕೂಲಕರ ವಾತಾವರಣವನ್ನು ಉತ್ತೇಜಿಸಲು ಏಂಜೆಲ್ ತೆರಿಗೆಯನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದ್ದರು. ಏಂಜೆಲ್ ಟ್ಯಾಕ್ಸ್ ರದ್ದತಿ ಮಾಡುವ ಮೂಲಕ ನಿರ್ಮಲಾ ಸೀತಾರಾಮನ್ ಹೂಡಿಕೆದಾರರಿಗೆ ಉಡುಗೊರೆ ನೀಡಿದ್ದಾರೆ.