ದಾವಣಗೆರೆ: ಹೊಂಚು ಹಾಕಿ ಮನೆಗಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ನಾಲ್ವರು ಕಳ್ಳರನ್ನು ಜಿಲ್ಲಾ ಪೊಲೀಸರು ಬಂಧನ ಮಾಡಿದ್ದಾರೆ. ಬಂಧಿತರಿಂದ ಚಿನ್ನ, ಬೆಳ್ಳಿ ಸೇರಿ 32.85 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.
ಇಂದು (ಜು. 12) ಮನೆಗಳ್ಳತನ ಮಾಡುವ ತಂಡವೊಂದು ಜಿಲ್ಲೆಯ ಹರಿಹರ ನಗರದಲ್ಲಿ ಕಳ್ಳತನ ಮಾಡಲು ಹೊಂಚು ಹಾಕಿದ ಬಗ್ಗೆ ಖಚಿತ ಮಾಹಿತಿಯು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಐಪಿಎಸ್ ಅವರಿಗೆ ಬಂದಿದೆ. ಈ ಮಾಹಿತಿ ಮೇರೆಗೆ ಕೂಡಲೇ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ. ಸಂತೋಷ & ಶ್ರೀಮಂಜುನಾಥ ಜಿ ಮಾರ್ಗದರ್ಶನದಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಉಪಾಧೀಕ್ಷಕ ಬಸವರಾಜ್ ಬಿ ಎಸ್ ಮತ್ತು ಹರಿಹರ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಎಸ್. ದೇವಾನಂದ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಕಛೇರಿಯ ಡಿಸಿಆರ್ ಬಿ ವಿಭಾಗದ ಸಿಬ್ಬಂದಿಗಳು ಹಾಗೂ ಹರಿಹರ ನಗರ ಠಾಣೆಯ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿ ಆರೋಪಿತರ ಪತ್ತೆಗೆ ಸೂಚಿಸಲಾಗಿತ್ತು.
ಈ ತಂಡವು ಕಾರ್ಯಾಚರಣೆ ನಡೆಸಿ ದಿನಾಂಕ: 12-07-2024 ರಂದು ಹರಿಹರ ನಗರದ ವಿದ್ಯಾನಗರದ ಹೊರವಲಯದಲ್ಲಿ ಮನೆಗಳ್ಳತನಕ್ಕೆ ಹೊಂಚು ಹಾಕಿ ಆಗಮಿಸಿದ್ದ ಮನೆಗಳ್ಳತನ ಮಾಡುವ ತಂಡವನ್ನು ಬೆನ್ನೇತ್ತಿ 04 ಜನರನ್ನು ವಶಕ್ಕೆ ಪಡೆದಿದ್ದು, ನಂತರ ಆರೋಪಿತರುಗಳನ್ನು ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ಮಾಡಿದ್ದಾರೆ. ಈ ವಿಚಾರಣೆ ವೇಳೆ ಆರೋಪಿಗಳು ಹರಿಹರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜೆ.ಸಿ.ಬಡಾವಣೆಯ ಮನೆಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿರುತ್ತದೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ತಂಡವು ಮನೆಗಳ್ಳತನದ ಆರೋಪಿತರುಗಳಾದ 1] ಕಿರಣ ಗುಬ್ಬಿ, 24ವರ್ಷ, 2) ಕೊಟ್ರೇಶ.ಸಿ.ಕೆ @ ಕುಪಸಾದ್, 22ವರ್ಷ, 3] ನಿತ್ಯಾನಂದ @ ನಿತ್ಯಾನಂದ ಕೆಳಗಿನಮನಿ, 24ವರ್ಷ, 4] ಶಿವರಾಜ್ @ ಶಿವು, 32ವರ್ಷ, ಇವರುಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ಆರೋಪಿತರಿಂದ ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.
- ಆರೋಪಿತರುಗಳಿಂದ ವಶಪಡಿಸಿಕೊಂಡ ಸ್ವತ್ತಿನ ವಿವರ
- 32,00,000/- ರೂ ಬೆಲೆಯ 434 ಗ್ರಾಂ ತೂಕದ ವಿವಿಧ ಬಂಗಾರದ ಆಭರಣಗಳು
- 40,000/-ರೂ ಬೆಲೆಯ 500 ಗ್ರಾಂ ತೂಕದ ಬೆಳ್ಳಿಯ ಗಟ್ಟಿ
- 45,000/-ರೂ ಬೆಲೆಯ ಆಪಲ್ ಐಪೋನ್ ವಾಚ್
- ಒಟ್ಟು- 32,85,000/-ರೂ ಬೆಲೆಯ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ
ಈ ಪ್ರಕರಣದಲ್ಲಿನ ಇನ್ನೊಬ್ಬ ಆರೋಪಿ ಶಂಕರ್ ಗುಬ್ಬಿ, 33ವರ್ಷ, ಕೂಲಿ ಕೆಲಸ, ವಾಸ: ರಾಣೆಬೆನ್ನೂರು ತಾಲೂಕ್, ಹಾವೇರಿ ಜಿಲ್ಲೆ. ಈತನು ಹಾಲಿ ಹಾವೇರಿ ಜಿಲ್ಲೆ ಹಲಗೇರಿ ಪೊಲೀಸ್ ಠಾಣೆ ಗ ಕೇಸಿನಲ್ಲಿ ಹಾವೇರಿ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರುತ್ತಾನೆ.



