ಬೆಂಗಳೂರು: ರಾಜ್ಯಾದ್ಯಂತ ನೈರುತ್ಯ ಮುಂಗಾರು ಮಳೆ ಚುರುಕು ಪಡೆದಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜು.9ರಂದು ಭಾರೀ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅರ್ಲಟ್ ಘೋಷಿಸಿದೆ. ಇದೇ ಜಿಲ್ಲೆಗಳಲ್ಲಿ ಜು.10ರಿಂದ ಮೂರು ದಿನ ಆರೆಂಜ್ ಅರ್ಲಟ್ ನೀಡಲಾಗಿದೆ.
ಶಿವಮೊಗ್ಗದ ಆಗುಂಬೆ, ಚಿಕ್ಕಮಗಳೂರಿನ ಮೂಡಗೆರೆ, ದಕ್ಷಿಣ ಕನ್ನಡದ ಮಂಗಳೂರು, ಹೊನ್ನಾವರ ಹಾಗೂ ಕಲಬುರಗಿ ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸೋಮವಾರ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ.ಪ್ರತಿ ಗಂಟೆಗೆ 55 ಕಿ.ಮೀ.ವೇಗದಲ್ಲಿ ಬಿರುಗಾಳಿ ಬೀಸಲಿದೆ. ಕರಾವಳಿಯ ಸಮುದ್ರದಲ್ಲಿ 3 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳು ಏಳಲಿವೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹಾಗೂ ಸಮುದ್ರ ದಡದ ಬಳಿ ಪ್ರವಾಸಿಗರು ತೆರಳದಂತೆ ಇಲಾಖೆ ಎಚ್ಚರಿಕೆ ಕೊಟ್ಟಿದೆ.
ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿಯಲ್ಲಿ ಜು.9ರಂದು ಮತ್ತು ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರದಲ್ಲಿ ಜು.10ರಂದು ಯೆಲ್ಲೋ ಅರ್ಲಟ್ ನೀಡಲಾಗಿದೆ. ದಕ್ಷಿಣ, ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.
ರಾಜ್ಯದ 10 ಜಿಲ್ಲೆಗಳಲ್ಲಿ ಮುಂದಿನ 6 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ.
ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಕೋಲಾರ, ರಾಮನಗರ, ತುಮಕೂರಿನಲ್ಲಿ ಮಳೆಯಾಗಲಿದೆ.
ಕ್ಯಾಸಲ್ರಾಕ್, ಮಂಕಿ, ಕೊಟ್ಟಿಗೆಹಾರ, ಲೋಂಡಾ, ಕುಮಟಾ, ಕದ್ರಾ, ಶಿರಾಲಿ, ಕೊಲ್ಲೂರು, ಗೋಕರ್ಣ, ಸೇಡಂ, ಆಗುಂಬೆಯಲ್ಲಿ ಮಳೆಯಾಗಿದೆ.



