ದಾವಣಗೆರೆ: ಕಳೆದ 20 ವರ್ಷಗಳಿಂದ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ನೇರ ಪಾವತಿಗೆ ಒಳಗಾಗಿದ್ದ ಪೌರ ಕಾರ್ಮಿಕರನ್ನು ಖಾಯಂಗೊಳಿಸಿದ ಆದೇಶ ಪ್ರತಿ ಹಾಗೂ ಶೇ.5ರ ಯೋಜನೆಯಡಿ ವಿಕಲಚೇತನ ಫಲಾನುಭವಿಗಳಿಗೆ ತ್ರಿ-ಚಕ್ರ ವಾಹನ ಮತ್ತು ಜೆರಾಕ್ಸ್ ಯಂತ್ರಗಳನ್ನು ಶಾಸಕ ಡಾ. ಶಾಮನೂರು ಶಿವಶಂಕರಪ್ಪನವರು ಮತ್ತು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ವಿತರಿಸಿದರು.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ನಿವಾಸದಲ್ಲಿ ನಡೆದ ಕಾರ್ಯಕ್ರದಲ್ಲಿ ವಿತರಿಸಲಾಯಿತು. ಈ ವೇಳೆ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ದಾವಣಗೆರೆ ಮಹಾನಗರಪಾಲಿಕೆ ವತಿಯಿಂದ ನೇರಪಾವತಿ ಪೌರ ಕಾರ್ಮಿಕರನ್ನು ಹಂತ ಹಂತವಾಗಿ ಒಟ್ಟು 250 ಪೌರ ಕಾರ್ಮಿಕರನ್ನು ಖಾಯಂಗೊಳಿಸಲಾಗಿರುತ್ತದೆ ಎಂದು ತಿಳಿಸಿದರು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಮಾತನಾಡಿ ಪೌರಕಾರ್ಮಿಕರ ಶ್ರಮದಿಂದಾಗಿ ಸ್ವಚ್ಚತೆಯಲ್ಲಿ ರಾಜ್ಯದಲ್ಲಿ 4ನೇ ಸ್ಥಾನ ಪಡೆದಿರುವ ದಾವಣಗೆರೆ ಮಹಾನಗರ ಪಾಲಿಕೆ ಮುಂದಿನ ದಿನಗಳಲ್ಲಿ ನಂಬರ್ 1 ಸ್ಥಾನ ಬರಲು ಶ್ರಮಿಸಬೇಕು. ಪೌರಕಾರ್ಮಿಕರು ನಗರ ಸ್ವಚ್ಚತೆ ವೇಳೆ ತಮ್ಮ ಆರೋಗ್ಯ ಸುರಕ್ಷತೆಗೂ ಸಹ ಗಮನ ಹರಿಸಿ ಕಾರ್ಯನಿರ್ವಹಿಸಬೇಕು ಎಂದರು.



