ದಾವಣಗೆರೆ: ಭದ್ರಾ ಜಲಾಶಯ ಪ್ರದೇಶವಾದ ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂಗಾರು ಮಳೆ ತಗ್ಗಿದೆ. ಭದ್ರಾ ಜಲಾಶಯದಲ್ಲಿ (Bhadra Reservoir Project) ಜೂ.29ರಂದು ಸಾವಿರ 6 ಸಾವಿರ ಕ್ಯೂಸೆಕ್ ಇದ್ದ ಒಳ ಹರಿವು, ಇಂದು( ಜು.1) 4,665 ಕ್ಯೂಸೆಕ್ ಗೆ ಕುಸಿತವಾಗಿದೆ. ಅಚ್ಚುಕಟ್ಟು ವ್ಯಾಪ್ತಿಯ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ರೈತರಲ್ಲಿ ತುಸು ಆತಂಕ ಮೂಡಿಸಿದೆ. ಅದರಲ್ಲೂ ಭದ್ರಾವತಿ, ಹೊನ್ನಾಳಿ, ಹರಿಹರ, ದಾವಣಗೆರೆ ಭಾಗದ ಭತ್ತದ ಬೆಳೆಗಾರಲ್ಲಿ ಭತ್ತ ಬೀಜ ಚೆಲ್ಲಲು ಮನಸ್ಸಿಲ್ಲದಂತಾಗಿದೆ.
ಕಳೆದ ವರ್ಷದ ತೀವ್ರ ಬರಗಾಲದಿಂದ 68 ವರ್ಷದಲ್ಲಿಯೇ ಅತಿ ಕಡಿಮೆ ನೀರು ಸಂಗ್ರಹವಾಗಿದ್ದ ಭದ್ರಾ ಜಲಾಯಶ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆ ಮತ್ತು ಮುಂಗಾರು ಮಳೆಯ ಉತ್ತಮ ಆರಂಭ ಪಡೆದಿತ್ತದರೂ, ನಂತರದ 20 ದಿನದಿಂದ ಸಂಪೂರ್ಣ ತಗ್ಗಿತ್ತು. ಇದರ ನಡುವೆ ಎರಡ್ಮೂರು ದಿನ ಉತ್ತಮ ಮಳೆಯಾಗಿ ಮತ್ತೆ ತಗ್ಗಿದೆ. ಇದರಿಂದ ರೈತರು ಕಳೆದ ವರ್ಷದ ಸ್ಥಿತಿಯೇ ಈ ವರ್ಷವೂ ಬರಲಿಯೇ ಎನ್ನುವ ಆತಂಕ ಮೂಡಿದೆ.
ತರಿಕೇರಿ ಮತ್ತು ಭದ್ರಾವತಿ ಗಡಿ ಭಾಗದಲ್ಲಿರುವ ಲಕ್ಕವಳ್ಳಿಯ ಭದ್ರಾ ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ ಇದ್ದು, ಗರಿಷ್ಠ 186 ಅಡಿಯಾಗಿದೆ. ಇಂದಿನ (ಜು.1) ನೀರಿನ ಮಟ್ಟ 124.7 ಅಡಿಯಷ್ಟಿದೆ. ಒಳ ಹರಿವು 4,665 ಕ್ಯೂಸೆಕ್ ನಷ್ಟಿದೆ.
- ಭದ್ರಾ ಜಲಾಶಯ ನೀರಿನ ವಿವರ
- ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ
- ಗರಿಷ್ಠ : 186 ಅಡಿ
- ಇಂದಿನ ಮಟ್ಟ: 124.7 ಅಡಿ
- ಒಳ ಹರಿವು : 4,665 ಕ್ಯೂಸೆಕ್
- ಹೊರ ಹರಿವು : 348 ಕ್ಯೂಸೆಕ್
- ಕಳೆದ ವರ್ಷ ಈ ದಿನದ ನೀರಿನ ಮಟ್ಟ: 136.11 ಅಡಿ
ಜೂ.24 ರಂದು ಡ್ಯಾಂ ಒಳ ಹರಿವು 771 ಕ್ಯೂಸೆಕ್, 25ರಂದು 1,419 ಕ್ಯೂಸೆಕ್ , ಜೂ.26 2276 ಕ್ಯೂಸೆಕ್ ಜೂ.28, 8,655 ಕ್ಯೂಸೆಕ್ ಜೂ.29 6,376 ಕ್ಯೂಸೆಕ್ ಹಾಗೂ ಇಂದು (ಜು.1) 4,665 ಕ್ಯೂಸೆಕ್ ಇದೆ.



