ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 48 ರ ಚಿತ್ರದುರ್ಗ ತಾಲೂಕಿನ ಭರಮಸಾಗರ ಸಮೀಪದ ಚಿಕ್ಕಬೆನ್ನೂರು ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರು ಬೆಂಗಳೂರು ಮೂಲದವರಾಗಿದ್ದಾರೆ.
ಬೆಂಗಳೂರಿನ ತಣಸಂದ್ರ ಮೂಲದ ಪ್ರಜ್ವಲ್ ರೆಡ್ಡಿ (30) , ಹರ್ಷಿತ (28) ಮತ್ತು ಎರಡು ವರ್ಷದ ಮಗು ಸೋಹನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಿಲ್ಪಾ, ಸ್ವರ್ಣ ಜಾಜ್೯, ಮಧುಮಿಥಾ, ವಿಜಯ್ ರೆಡ್ಡಿ, ಶ್ರೀಕೃಷ್ಣ ಎಂಬುವರೇ ಕಾರಿನಲ್ಲಿದ್ದ ಐವರು. ಇವರು ತೀವ್ರ ಗಾಯಗೊಂಡಿದ್ದಾರೆ. ಇವರನ್ನು ದಾವಣಗೆರೆ ಎಸ್ ಎಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.
ಬೆಂಗಳೂರಿನಿಂದ ಗೋವಾಕ್ಕೆ ತೆರಳುವ ವೇಳೆ ಚಿಕ್ಕಬೆನ್ನೂರು ಗ್ರಾಮದ ಬಳಿ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ. ಕಾರಿಲ್ಲಿದ್ದ ಮೂವರು ಮೃತಪಟ್ಟಿದ್ದು, ಇನ್ನುಳಿದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.