ದಾವಣಗೆರೆ: ಕಳೆದ ವರ್ಷದ ತೀವ್ರ ಮಳೆ ಕೊರತೆಯಿಂದ ರಾಜ್ಯದಲ್ಲಿಯೇ ಬರ ಆವರಿಸಿದೆ. ಅದರಲ್ಲೂ ದಾವಣಗೆರೆ ಜಿಲ್ಲೆ ರೈತರ ಜೀವನಾಡಿಯಾದ ಭದ್ರಾ ಜಲಾಶಯದ ಸುತ್ತಮುತ್ತಲಿನ ಮಲೆನಾಡಿನಲ್ಲಿಯೇ ಕಳೆದ ವರ್ಷ ನಿರೀಕ್ಷಿತ ಮಳೆ ಬೀಳಲಿಲ್ಲ. ಇದರಿಂದ ಮುಂಗಾರಿನಲ್ಲಿ ಜಲಾಶಯ ಕೂಡ ತುಂಬಲಿಲ್ಲ. ಜಲಾಶಯದಿಂದ ಬೇಸಿಗೆ ಬೆಳೆಗೆ ನೀರು ಹರಿಸುವುದಿರಲಿ, ಮುಂಗಾರು ಬೆಳೆಗೆಯೇ ಹೋರಾಟ ಮಾಡಿ ನೀರು ತರುವಂತಾಗಿತ್ತು. ಕಳೆದ ವರ್ಷ(2023) ಮೇ ತಿಂಗಳಲ್ಲಿ 145.7 ಅಡಿ ಸಂಗ್ರಹವಿದ್ದ ಭದ್ರಾ ಜಲಾಶಯ ನೀರು, ಈ ವರ್ಷ (2024) ಮೇ 4ರ ವೇಳೆಗೆ 116.5 ಅಡಿ ಇದೆ. ಇದು 68 ವರ್ಷದ ಇತಿಹಾಸದಲ್ಲಿಯೇ ನೀರಿನ ಸಂಗ್ರಹ ದಾಖಲೆಯ ಕುಸಿತ ಕಂಡಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಲಕ್ಕವಳ್ಳಿಯ ಭದ್ರಾ ಜಲಾಶಯ ತನ್ನ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ನೀರು ಸಂಗ್ರಹವಾಗಿದೆ. ಕಳೆದ ವರ್ಷ(2023) ಇದೇ ದಿನ 145.7ಅಡಿ ನೀರಿತ್ತು. ತೀವ್ರ ಬರಗಾಲವಿದ್ದ 2004ಕ್ಕಿಂತ ಮುನ್ನ 2003ರಲ್ಲಿ 118 ಅಡಿ ನೀರಿನ ಸಂಗ್ರಹವಿತ್ತು. ಈವರೆಗಿನ ಕನಿಷ್ಠ ನೀರು ಸಂಹ್ರಹವಾಗಿತ್ತು. ಈಗ 2024 ಮೇ 4 ರಂದು ಜಲಾಶಯದಲ್ಲಿ 116.5 ಅಡಿ ನೀರು ಇದೆ. ಇದು 68 ವರ್ಷ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ನೀರು ಸಂಗ್ರಹವಾಗಿದೆ
ಭದ್ರಾ ಜಲಾಶಯದಲ್ಲಿ ಪ್ರಸ್ತುತ 8.5 ಟಿಎಂಸಿ ಅಡಿ ಡೆಡ್‌ಸ್ಟೋರೇಜ್ ಸೇರಿ ಒಟ್ಟು 13.8 ಟಿಎಂಸಿ ಅಡಿ ನೀರಿನ ಮಾತ್ರ ಸಂಗ್ರಹವಿದೆ. ಜಲಾಯಶಯ ನೀರು ಇಷ್ಟೊಂದು ಕಡಿಮೆ ಸಂಗ್ರಹವಾಗಿರುವುದು 68 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲಾಗಿದೆ. ಜಲಾಶಯದ ಬಲದಂಡೆ ನಾಲೆಯ ಗೇಟ್ ಸಂಪೂರ್ಣ ತೆರೆಯಲಾಗಿದೆ. ಕಳೆದ ಮೂರು ದಿನಗಳಿಂದ 2,000 ಕ್ಯುಸೆಕ್‌ನಷ್ಟು ಮಾತ್ರ ಹರಿಯುತ್ತಿದೆ. ಇದೇ ರೀತಿ ಇನ್ನು ಎರಡು ದಿನ (ಮೇ 6 ರಾತ್ರಿ ವರೆಗೆ) ನೀರು ಹರಿಸಿ ನಿಲ್ಲಿಸಲಾಗುವುದು ಎಂದು ಭದ್ರಾ ಜಲಾಶಯದ ಕಾರ್ಯನಿರ್ವಾಹಕ ಎಂಜಿನಿಯರ್ ಎನ್ .ರವಿಕುಮಾರ್ ಮಾಹಿತಿ ನೀಡಿದ್ದಾರೆ.



