ಚಿತ್ರದುರ್ಗ: ತಾಲ್ಲೂಕಿನ ಸಿರಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮತದಾನ ಮಾಡಿದರು.
ಮತ ಮತಚಲಾಯಿಸಿ ನಂತರ ಮಾತನಾಡಿದ ಶ್ರೀಗಳು, ಮತದಾನ ಪೂಜೆಯಷ್ಟೆ ಪವಿತ್ರ ಕಾರ್ಯ. ಪ್ರಜ್ಞಾವಂತ ನಾಗರಿಕರು ಶೇಕಡಾ 100 ರಷ್ಟು ಮತದಾನ ಮಾಡಬೇಕು. ನಾಗರಿಕರಾಗಿ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುವ ಎಲ್ಲಾ ನಾಗರಿಕರು ರಾಷ್ಟ್ರದ ಹಿತದೃಷ್ಟಿಯಿಂದ ಕಡ್ಡಾಯ ಮತದಾನ ಮಾಡುವಂತೆ ಕರೆ ನೀಡಿದರು.
ಮತದಾನ ಮಾಡದವರಿಗೆ ನಾಗರಿಕ ಸೌಕರ್ಯಗಳು ರದ್ದು ಮಾಡುವಂತೆ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗ ವಿಶೇಷ ಕಾಯಿದೆ ಜಾರಿಗೆ ತರುವ ಅವಶ್ಯಕತೆ ಜರೂರಾಗಿ ಆಗಬೇಕಿದೆ ಎಂದು ಆಶಿಸಿದರು.
ಆಸ್ಟ್ರೇಲಿಯಾ ಮತ್ತಿತರ ದೇಶಗಳಲ್ಲಿ ನಾವು ಕಂಡಂತೆ ಮತದಾನ ಶೇಕಡಾ 100 ರಷ್ಟು ಆಗುವುದು. ನಮ್ಮಲ್ಲಿ ಇತ್ತಿಚಿನ ವರ್ಷಗಳಲ್ಲಿ ಜಾಗೃತಿ ತೀವ್ರವಾಗಿ ಮೂಡಿಸಿದ್ದರು ಮತದಾನ ನಮ್ಮ ಹಕ್ಕು ಎಂಬ ಭಾವನೆ ಪ್ರಜೆಗಳಲ್ಲಿ ಇನ್ನೂ ಅಲ್ಲಲ್ಲಿ ಮೂಡದೇ ಉದಾಸೀನತೆಯಿಂದ ಮತ ಚಲಾವಣೆಯಿಂದ ದೂರ ಉಳಿಯುತ್ತಿರುವುದು ನಿಜಕ್ಕೂ ಬೇಸರವಾದ ಸಂಗತಿಯಾಗಿದೆ ಎಂದರು.
ನಿಮ್ಮ ಕೈಬೆರಳಿಗೆ ಹಚ್ಚುವ ಮಸಿ ನಿಮ್ಮ ಮುಖಕ್ಕೆ ಮೆತ್ತಿದ ಮಸಿಯಾಗದಿರಲಿ; ಮತದಾನ ಪೂಜೆಯಷ್ಟೇ ಪವಿತ್ರ ಕಾರ್ಯ. ನಿತ್ಯವೂ ದೇವರ ಪೂಜೆಗೆ ಮುನ್ನ ತಪ್ಪದೆ ದೀಪ ಹಚ್ಚುವಂತೆ ಐದು ವರ್ಷಕ್ಕೊಮ್ಮೆ ಅಪರೂಪಕ್ಕೆ ಬರುವ ಈ ಲೋಕಸಭಾ ಚುನಾವಣೆಯಲ್ಲಿ ಮತದಾನದ ದೀಪವನ್ನು ತಪ್ಪದೇ ಹಚ್ಚಿ ದೇಶದ ಭವಿಷ್ಯ ಉಜ್ವಲವಾಗಿ ಬೆಳಗುವಂತೆ ಮಾಡಿರಿ!
ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ, ನಿಸ್ವಾರ್ಥ ದೇಶ ಸೇವೆ ಮಾಡಬಲ್ಲ ಯೋಗ್ಯ ಅಭ್ಯರ್ಥಿಗಳಿಗೆ ನಿಮ್ಮ ಪವಿತ್ರ ಮತ ಚಲಾಯಿಸಿರಿ.ಚುನಾವಣೆಯ ಸಂದರ್ಭದಲ್ಲಿ ನಿಮ್ಮ ಕೈಬೆರಳಿಗೆ ಹಚ್ಚುವ ಮಸಿ ನಿಮ್ಮ ಮುಖಕ್ಕೆ ಮೆತ್ತಿದ ಮಸಿಯಾಗದಿರಲಿ. ಅದನ್ನು ಅಳಿಸಲು ಮತ್ತೆ ಐದು ವರ್ಷಗಳು ಬೇಕಾಗುತ್ತವೆ ಎಂಬುದು ನಿಮ್ಮ ನೆನಪಿನಲ್ಲಿರಲಿ! ಭಾರತೀಯ ತಾಯಂದಿರು ತಮ್ಮ ಮಗುವಿನ ಹಾಲು ಗಲ್ಲದ ಮೇಲೆ ಇಡುವ ದೃಷ್ಟಿ ಬೊಟ್ಟಿನಂತೆ ಭಾರತಮಾತೆಯು ನೆರೆಹೊರೆ ದೇಶಗಳ ದೃಷ್ಟಿ ತಾಗದಂತೆ ನಿಮ್ಮ ಕೈ ಬೆರಳಿಗೆ ಹಚ್ಚಿದ ದೃಷ್ಟಿ ಬೊಟ್ಟಿನಂತಾಗಲಿ ಎಂದು ಶ್ರೀಗಳು ಮತದಾನ ಮಾರ್ಗದರ್ಶನ ಮಾಡಿದರು.
ಮತದಾನ ಮಾಡಲು ಆಸಕ್ತಿ ಇದ್ದರೂ ವಿಶೇಷ ಕಾರಣಗಳಿಂದ ಮತಚಲಾವಣೆಯಿಂದ ದೂರ ಉಳಿಯುವವರಿಗೆ ಆನ್ಲೈನ್ ಮತದಾನ ವ್ಯವಸ್ಥೆಯ ಮೂಲಕ ಯಾವುದೇ ಮತಗಟ್ಟೆಯಲ್ಲಿ ಮತ ಚಲಾಯಿಸುವ ಅವಕಾಶ ಕಲ್ಪಿಸುವಂತಾಗಬೇಕೆಂದು ಸಲಹೆ ನೀಡಿದರು. ಮತಗಟ್ಟೆ ಅಧಿಕಾರಿಗಳು, ರಕ್ಷಣಾ ಸಿಬ್ಬಂದಿಯೊಂದಿಗೆ ಮತದಾನ ಪ್ರಕ್ರಿಯೆಯ ವಿಷಯಗಳನ್ನು ಚರ್ಚಿಸಿದರು.
ಸಿರಿಗೆರೆ ಸಮೀಪದ ಸಿದ್ದಾಪುರ ಗ್ರಾಮವು ಸಿರಿಗೆರೆ ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮವಾಗಿದ್ದು, ಗಣಿಬಾಧಿತ ಗ್ರಾಮವಾಗಿದೆ. ಸಮೀಪದ ಗಾದರಿ ಗುಡ್ಡ ವ್ಯಾಪ್ತಿಯಲ್ಲಿ ಮೈನಿಂಗ್ ಗಣಿಗಾರಿಕೆ ಹತ್ತಾರು ವರ್ಷಗಳಿಂದ ನಡೆಯುತ್ತಿದೆ. ಗಣಿ ಕಂಪನಿಗಳಿಂದ ಗಣಿ ಬಾಧಿತ ಗ್ರಾಮಗಳ ಅಭಿವೃದ್ಧಿಗೆ ಮೀಸಲಿಟ್ಪಿರುವ ಮೂಲ ಭೂತ ಸೌಕರ್ಯಗಳ ಅಭಿವೃದ್ಧಿಗೆ ವಿನಿಯೋಗಿಸುವ ಹಣದ ಅಭಿವೃದ್ಧಿ ಪಡಿಸುವ ಗ್ರಾಮಗಳ ಪಟ್ಟಿಯಲ್ಲಿ ಗಣಿಗಾರಿಕೆಯ ಕೂಗಳತೆಯ ದೂರದಲ್ಲಿರುವ ಸಿದ್ದಾಪುರ ಗ್ರಾಮವನ್ನು ಹೊರಗಿಟ್ಟು ಹತ್ತಾರು ಕಿಲೋಮೀಟರ್ ದೂರದಲ್ಲಿರುವ ಗ್ರಾಮಗಳನ್ನು ಸೇರಿಸಲಾಗಿದೆ. ಈ ಬೆಳವಣಿಗೆಯಿಂದ ಆಕ್ರೋಶಿತರಾದ ಸಿದ್ದಾಪುರ ಗ್ರಾಮಸ್ಥರು ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಯಿಂದ ದೂರ ಸರಿದು ಮತದಾನ ಬಹಿಷ್ಕರಿಸಿದ್ದರು.
ಬೆಳಿಗ್ಗೆಯಿಂದ ಗ್ರಾಮದ ಯಾರೊಬ್ಬರೂ ಮತ ಚಲಾಯಿಸಿರುವುದಿಲ್ಲ. ಈ ಸಂಬಂಧ ಸಿದ್ದಾಪುರ ಗ್ರಾಮವನ್ನು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಧಿಯ ಪಟ್ಟಿಗೆ ಸೇರಿಸುವಂತೆ ಹಲವಾರು ಬಾರಿ ಮನವಿ ಮಾಡಿದರೂ ಗಣಿ ಕಂಪನಿಗಳು ಸ್ಪಂದಿಸದ ಕಾರಣ ಈ ಭಾರಿ ಮತದಾನ ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀ ತರಳಬಾಳು ಜಗದ್ಗುರು ಈ ಮಧ್ಯಾಹ್ನ ಸಿರಿಗೆರೆಯಲ್ಲಿ ಮತ ಚಲಾಯಿಸಿದ ನಂತರ ಸಿದ್ದಾಪುರ ಗ್ರಾಮಸ್ಥರು ಮತದಾನ ಬಹಿಷ್ಕರಿಸಿರುವ ವಿಷಯ ತಿಳಿದ ತಕ್ಷಣ ಗ್ರಾಮಕ್ಕೆ ತೆರಳಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹಾರದ ಭರವಸೆ ನೀಡಿದರು. ಗಣಿ ಕಂಪನಿಗಳ ಮಾಲೀಕರೊಂದಿಗೆ ಶ್ರೀ ಜಗದ್ಗುರುಗಳವರು ಮಾತನಾಡಿದ ತರುವಾಯ ಮತದಾನ ಬಹಿಷ್ಕರಿಸಿದ್ದ ಸಿದ್ದಾಪುರ ಗ್ರಾಮಸ್ಥರು ಶ್ರೀ ತರಳಬಾಳು ಜಗದ್ಗುರುಗಳವರ ಸೂಚನೆಯಂತೆ ಮತ ಚಲಾಯಿಸಲು ಆರಂಭಿಸಿದರು.