ದಾವಣಗೆರೆ: ಅಕ್ರಮ ಮರಳು ಗಣಿಗಾರಿಕೆ ಪ್ರಶ್ನಿಸಿ ಮಾಧ್ಯಮಗಳ ಮುಲಕ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದ ಹರಿಹರ ಶಾಸಕ ಬಿ.ಪಿ. ಹರೀಶ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಎಸ್ಪಿಗೆ ಶಾಸಕರು ದೂರು ಸಲ್ಲಿಸಿದ್ದಾರೆ.
ದಾವಣಗೆರೆ ನಗರದಲ್ಲಿ ಮಂಗಳವಾರ ಬೆಳಗ್ಗೆ ಘಟನೆ ನಡೆದಿದೆ. ಶಾಸಕ ಹರೀಶ್ ಬೆಳಗಿನ ವಾಯುವಿಹಾರ ಮುಗಿಸಿಕೊಂಡು ಜಿಲ್ಲಾ ಆಸ್ಪತ್ರೆ ಎದುರಿನ ಕಾಫಿ ಬಾರ್ ಬಳಿ ಬಂದಿದ್ದ ವೇಳೆ ಅಮರಾವತಿ ಮಂಜುನಾಥ್ ಬೆದರಿಕೆ ಹಾಕಿದ್ದಾರೆ. ಮರಳು ಗಣಿಗಾರಿಕೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿತ್ತೀರಾ..? ಯಾವ ಧೈರ್ಯದಿಂದ ಹರಿಹರಕ್ಕೆ ಬರ್ತಿರಾ..?, ನಿನ್ನನ್ನು ಉಳಿಸುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶಾಸಕ ಹರೀಶ್ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಚಿಕ್ಕಬಿದರೆ, ಹರಪನಹಳ್ಳಿ ತಾಲೂಕಿನ ವಟ್ಲಹಳ್ಳಿ ಸಮೀಪ ತುಂಗಭದ್ರ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಶಾಸಕ ಹರೀಶ್ ದೂರಿದ್ದಾರೆ.
ಕಾನೂನುಬಾಹಿರವಾಗಿ ಮರಳು ಗಣಿಗಾರಿಕೆ ಮಾಡುವುದು. ಧಮ್ಕಿ ಹಾಕುವವರನ್ನು ಬಂಧಿಸಬೇಕು ಹಾಗೂ ಶಾಸಕ ಹರೀಶ್ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಂತಹ ಪ್ರಕರಣಗಳು ಎಗ್ಗಿಲ್ಲದೇ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಜಿಲ್ಲಾಡಳಿತ ಇದಕ್ಕೆ ಉತ್ತರಿಸಬೇಕು. ಕಾಂಗ್ರೆಸ್‌ನವರು ಸಂವಿಧಾನದ ಹೆಸರೇಳಿಕೊಂಡು ಹೊಟ್ಟೆಪಾಡಿನ ರಾಜಕಾರಣ ಮಾಡಿತ್ತಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್. ರಾಜಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.



