ದಾವಣಗೆರೆ: ಜಿಲ್ಲೆಯಲ್ಲಿ ನಿನ್ನೆ ಸಂಜೆ (ಏ.18) ಬಿರು ಗಾಳಿ, ಗುಡುಗು ಸಿಡಿಲಿನ ಆರ್ಭಟ ಜೋರಾಗಿತ್ತು. ಈ ಸಿಡಿಲು ಬಡಿದು 25 ಮೇಕೆಗಳು ಸಾವನ್ನಪ್ಪಿದ್ದು, ಮತ್ತೊಂದೆಡೆ ಹತ್ತಾರು ವಿದ್ಯುತ್ ಕಂಬ, ಮರಗಳು ಧರೆಗುರುಳಿ ಬಿದ್ದಿವೆ.
ತಾಲೂಕಿನ ಈಚಘಟ್ಟ ಗ್ರಾಮದಲ್ಲಿ ಸಂಜೆ ಗಾಳಿ, ಗುಡುಗು, ಮಿಂಚು, ಸಿಡಿಲಿನ ಆರ್ಭಟಕ್ಕೆ ಜಮೀನಿನಲ್ಲಿ ಮೇಕೆ ಮೇಯಿಸಲು ಹೋಗಿದ್ದ ರೈತನ 25 ಮೇಕೆಗಳು ಸಿಡಿಲು ಬಡಿದು ಸಾವನ್ನಪ್ಪಿವೆ. ಇದರಿಂದಾಗಿ ಸುಮಾರು 5 ಲಕ್ಷ ರು.ಗೂ ಅಧಿಕ ನಷ್ಟ ಸಂಭವಿಸಿದೆ ಎನ್ನಲಾಗಿದೆ. ಅದೃಷ್ಟವಶಾತ್ ಕುರಿಗಳ ಮಾಲೀಕರಾದ ಪಾಪ್ಯಾನಾಯ್ಕ ಹಾಗೂ ಪತ್ನಿ ರೇವತಿಬಾಯಿ ಸಿಡಿಲಿನ ಹೊಡೆತದಿಂದ ಪಾರಾಗಿ, ಸಾವನ್ನು ಗೆದ್ದಿದ್ದಾರೆ.ವಿಷಯ ತಿಳಿಯುತ್ತಿದ್ದಂತೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಸ್ಥಳಕ್ಕೆ ಆಗಮಿಸಿ ಮೇಕೆಗಳ ಮಾಲೀಕರಿಗೆ ಧೈರ್ಯ ಹೇಳಿ, ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ಮತ್ತೊಂದೆಡೆ ಜಿಲ್ಲೆಯಲ್ಲಿ ಭಾರೀ ಗಾಳಿ, ಸಿಡಿಲು, ಗುಡುಗು, ಮಿಂಚಿನ ಆರ್ಭಟಕ್ಕೆ ಹಲವಾರು ಕಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಏಕಾಏಕಿ ವಿದ್ಯುತ್ ತಂತಿಗಳ ಮೇಲೆ ರೆಂಬೆ ಕೊಂಬೆ ಬಿದ್ದಿದ್ದರಿಂದ ಅನೇಕ ಕಡೆ ವಿದ್ಯುತ್ ಸ್ಥಗಿತವಾಗಿತ್ತು. ಬೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಲು ಹರಸಾಹಸಪಟ್ಟರು.
ದಾವಣಗೆರೆ ನಗರದ ಹಳೆ ಸಾಗರ್ ಬೆಣ್ಣೆದೋಸೆ ಹೊಟೆಲ್ ಬಳಿ ಮರ ವಿದ್ಯುತ್ ತಂತಿ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಕಂಬಗಳು ಹತ್ತಾರು ದ್ವಿಚಕ್ರ ವಾಹನಗಳ ಮೇಲೆ ತಂತಿ ಸಮೇತ ಬಿದ್ದು, ವಾಹನಗಳು ಸಾಕಷ್ಟು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.