ದಾವಣಗೆರೆ: ಮೆಕ್ಕೆಜೋಳ ಹೊಲದಲ್ಲಿ ಅವಿತು ಕುಳಿತಿದ್ದ ಚಿರತೆಯನ್ನು ಗ್ರಾಮಸ್ಥರು ಕಲ್ಲಿನಿಂದ ಹೊಡೆದು ಹಿಡಿದ್ದಾರೆ. ಇದರಿಂದ ಆತಂಕದಲ್ಲಿದ್ದ ಜನರು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ.
ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೋಟೆ ಮಲ್ಲೂರು ಗ್ರಾಮದಲ್ಲಿ ಭಯ ಹುಟ್ಟಿಸಿದ ಚಿರತೆಯನ್ನು ಗ್ರಾಮಸ್ಥರೇ ಸೆರೆಹಿಡಿದಿದ್ದಾರೆ. ಕೋಟೆ ಮಲ್ಲೂರು ಗ್ರಾಮದಲ್ಲಿ ಮೂರ್ನಾಲ್ಕು ದಿನಗಳಿಂದ ಚಿರತೆಯೊಂದು ಭಯ ಹುಟ್ಟಿಸಿತ್ತು. ನಾಲ್ವರ ಮೇಲೆ ದಾಳಿ ಮಾಡಿತ್ತು. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದರು.
ಅರಣ್ಯಾಧಿಕಾರಿಗಳನ್ನು ನಂಬಿಕೊಂಡರೆ ಚಿರತೆ ಸೆರೆಹಿಡಿಯುವುದಿಲ್ಲ ಎಂದುಕೊಂಡು, ತಾವೇ ಕೈಯಲ್ಲಿ ದೊಣ್ಣೆ ಹಿಡಿದು ಚಿರತೆ ಸೆರೆ ಹಿಡಿದಿದ್ದಾರೆ. ಮೆಕ್ಕೆಜೋಳ ಹೊಲದಲ್ಲಿ ಚಿರತೆಯು ಅವಿತು ಕುಳಿತಿದೆ ಎಂದು ವಿಚಾರ ತಿಳಿಯುತ್ತಿದ್ದಂತೆ, ದೊಣ್ಣೆ ಹಿಡಿದು ನುಗ್ಗಿದ್ದರು. ಇವರಿಂದ ತಪ್ಪಿಸಿಕೊಂಡು ಓಡಲು ಶುರು ಮಾಡಿದ ಚಿರತೆಗೆ ಕಲ್ಲುಗಳಿಂದ ಹೊಡೆದಿದ್ದಾರೆ. ನಂತರ ಚಿರತೆಯನ್ನು ಹಿಡಿದು ಕಾಲು ಕಟ್ಟಿ, ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಚಿರತೆಯನ್ನು ರಕ್ಷಣೆ ಮಾಡಿದ್ದಾರೆ.



