ದಾವಣಗೆರೆ: ಚುನಾವಣೆ ಹೊಸ್ತಿಲಲ್ಲಿ ಮಾಜಿ ಸಚಿವ, ಹಿರಿಯ ನಾಯಕ, ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡುವ ಭರದಲ್ಲಿ ಮಹಿಳೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ವಿರುದ್ಧ ಮಾತನಾಡುವಾಗ, ಮಹಿಳೆಯರು ಅಡುಗೆ ಮಾಡಲು ಲಾಯಕ್ಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದೀಗ ವ್ಯಾಪಕ ಆಕ್ರೋಶ ಹಾಗೂ ಟೀಕೆಗೆ ಗುರಿಯಾಗಿದೆ.
ದಾವಣಗೆರೆ ಬಂಟರ ಭವನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಜನಪ್ರತಿನಿಧಿಗಳು, ಮುಖಂಡರ ಸಭೆಯಲ್ಲಿ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಗಾಯತ್ರಿ ಸಿದ್ದೇಶ್ವರ್ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾತನಾಡಲು ಬಾರದ ಗಾಯತ್ರಿ ಸಿದ್ದೇಶ್ವರ್ ಅವರು ಅಡುಗೆ ಮಾಡುವುದಕ್ಕೆ ಲಾಯಕ್ಕು. ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವ ಶಕ್ತಿ ಅವರಿಗಿಲ್ಲ ಎಂದಿದ್ದಾರೆ. ಸ್ವತಃ ಅವರ ಸೊಸೆಯೇ ಕಾಂಗ್ರೆಸ್ ಮಹಿಳಾ ಅಭ್ಯರ್ಥಿ ವಾಗಿದ್ದರೂ, ಮಹಿಳೆ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ.
ಮಾತು ಮುಂದುವರೆಸಿ ಗಾಯತ್ರಿ ಸಿದ್ದೇಶ್ವರ್ ಅವರು ತಾವು ದಾವಣಗೆರೆಯಿಂದ ಗೆದ್ದು ನರೇಂದ್ರ ಮೋದಿ ಅವರಿಗೆ ಕಮಲದ ಹೂವನ್ನು ಅರ್ಪಿಸುತ್ತೇನೆ ಎಂದು ಹೇಳುತ್ತಾರೆ. ಹಾಗಾದರೆ, ಈ ಹಿಂದೆ ಗೆದ್ದಿದ್ದು ನೀವೇ (ಬಿಜೆಪಿಯವರೇ) ಅಲ್ಲವೇ? ಆಗ ಏನು ನೀವು ಕಮಲದ ಹೂವನು ಕೊಟ್ಟಿದ್ದಿರಾ? ಎಂದು ಶಾಮನೂರು ಶಿವಶಂಕರಪ್ಪ ಪ್ರಶ್ನೆ ಮಾಡಿದ್ದಾರೆ.
ವಿರೋಧ ಪಕ್ಷದವರು ಮೋದಿ.. ಮೋದಿ ಅಂತಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಏನು ಕೊಡುಗೆಯನ್ನು ಕೊಟ್ಟಿದ್ದಾರೆ? ನಮ್ಮ ರಾಜ್ಯಕ್ಕೆ ಬರಬೇಕಾದ ಹಣವನ್ನು ನೀಡದೆ ಅನ್ಯಾಯ ಮಾಡಿದ್ದಾರೆ ಎಂದು ಶಾಮನೂರು ಶಿವಶಂಕರಪ್ಪ ಕಿಡಿಕಾರಿದ್ದಾರೆ.
ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ (Malavika Avinash) ಸಹ ಕಿಡಿಕಾರಿದ್ದು, ನಿಮ್ಮ ಮನೆಯ ಸೊಸೆಯನ್ನೂ ಕಣಕ್ಕಿಳಿಸಿದ್ದನ್ನು ಮರೆತಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಮಹಿಳೆಯರ ಬಗ್ಗೆ ಮಾತನಾಡುವ ಕೆಟ್ಟ ಚಾಳಿ ಕಾಂಗ್ರೆಸ್‌ಗಿದೆ. ಸೋಲುವ ಹತಾಶೆಯಿಂದ ಈ ರೀತಿ ಹೇಳಿಕೆ ನೀಡಿದ್ದಾರೆ. ಕೂಡಲೇ ಶಾಮನೂರು ಶಿವಶಂಕರಪ್ಪ ಅವರು ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮಾತನಾಡಿ, ಮಹಿಳೆಯರಿಗೆ ಅಡುಗೆ ಮಾಡೋಕೂ ಗೊತ್ತು, ಆಕಾಶದಲ್ಲಿ ಹಾರಾಡೋಕೂ ಗೊತ್ತು ಎಂದು ತಿರುಗೇಟು ನೀಡಿದ್ದಾರೆ. ಎಲ್ಲ ಕ್ಷೇತ್ರದಲ್ಲಿ ಮಹಿಳೆ ಕೊಡುಗೆ ಇದೆ. ಈ ವಿಚಾರ ಅಜ್ಜನಿಗೆ ಗೊತ್ತಿಲ್ಲವೆಂದು ಅನ್ನಿಸುತ್ತದೆ. ಇಂಥ ಹೇಳಿಕೆ ನೀಡುವ ಮೂಲಕ ಶಾಮನೂರು ಶಿವಶಂಕರಪ್ಪ ಅವರು ಮಹಿಳೆಯರಿಗೆ ಅಗೌರವ ತೋರಿದ್ದಾರೆ ಎಂದು ಗಾಯತ್ರಿ ಸಿದ್ದೇಶ್ವರ್ ಆಕ್ರೋಶವನ್ನು ಹೊರಹಾಕಿದರು.



